ಕನ್ನಡಪ್ರಭ ವಾರ್ತೆ, ತುಮಕೂರು ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಪ್ರತಿ ಮಾಹೆಯಲ್ಲಿ ಕನಿಷ್ಠ ೧೫ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದು ಅತ್ಯಂತ ಗಾಬರಿ ಮೂಡಿಸುವ ಸಂಗತಿ ಎಂದು ಸಾಂತ್ವನ ಕೇಂದ್ರದ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಕಳವಳಿಸಿದರು.
4 ರಿಂದ 20 ವರ್ಷಗಳ ಅವಧಿಯಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಇರುವುದಿಲ್ಲ. ಈ ಅವಧಿಯಲ್ಲಿ ಮನಸ್ಸನ್ನು ಯಾರು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅವರು ಸಾಧನೆ ಮಾಡಲು ಸಾಧ್ಯ. ಪ್ರೌಢಾವಸ್ಥೆಯಲ್ಲಿ ಪ್ರೇಮ ಪ್ರಣಯದ ಗೀಳಿಗೆ ಬಿದ್ದು ಭವಿಷ್ಯದ ಬದುಕನ್ನೇ ನಾಶಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹದಿನಾಲ್ಕರಿಂದ 20 ವರ್ಷ ಅವಧಿಯ ವಯೋಮಾನ ಅತ್ಯಂತ ಸೂಕ್ಷ್ಮವಾದದ್ದು. ಈ ಅವಧಿಯಲ್ಲಿ ವ್ಯಾಸಂಗ ಮಾಡುವ ಪ್ರೌಢಶಾಲೆ ಹಾಗೂ ಪಿಯು ಹಂತದ ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಎಡವಟ್ಟಾದರೂ ಭವಿಷ್ಯ ಭಯಾನಕವಾಗಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಬಳಕೆ ಯುವ ಜನರನ್ನು ಆಕರ್ಷಿಸುತ್ತಿದ್ದು, ಇದರಿಂದಲೇ ಸಾಕಷ್ಟು ಅಪರಾಧ ಪ್ರಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ಪರಿಚಯ ಪ್ರೇಮಕ್ಕೆ ತಿರುಗಿ, ಶಾಲೆ ಬಿಟ್ಟು ಸುತ್ತಾಡಿದರೆ ಮುಂದಿನ ದಿನಗಳೆ ಕಷ್ಟಕರವಾಗಿ ಪರಿಣಮಿಸಲಿವೆ. ಇಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳು ನಮ್ಮನ್ನು ಸುತ್ತುವರಿಯಲಿವೆ. ಇದರಿಂದ ಕುಟುಂಬವೂ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
ಮನೆಯಿಂದ ಹೊರಗೆ ಅಥವಾ ಎಲ್ಲಿಯಾದರೂ ಲೈಂಗಿಕ ಕಿರುಕುಳಗಳು ಉಂಟಾದಲ್ಲಿ ಆರಂಭಿಕ ಹಂತದಲ್ಲಿಯೇ ಅದನ್ನು ತಡೆಯಲು ಪ್ರಯತ್ನಿಸಬೇಕು. ಅಂತಿಮವಾಗಿ ದೂರು ನೀಡಲು ಹಿಂಜರಿಯಬಾರದು ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಕಾರ್ಯದರ್ಶಿ ಮಮತ ಸುರೇಶ್ ಅವರು ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ಕಲಿಕೆಯ ಜೊತೆಗೆ ಇತರೆ ವಿಷಯಗಳನ್ನು ಕಲಿಸಿದರೆ ಅವರ ಭವಿಷ್ಯದ ಬದುಕು ಸುಂದರವಾಗುತ್ತದೆ. ಈ ಕಾರಣಕ್ಕಾಗಿ ಸಾಮಾಜಿಕ ಜಾಗೃತಿ, ಕಾನೂನು ಅರಿವು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದಾಗಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ ಎಂದರು.ಕಲಿಯುವ ದಿನಗಳಲ್ಲಿ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯುವ ಕಡೆಗೆ ಗಮನ ಕೊಡದೆ ಓದಿನತ್ತ ಗಮನಹರಿಸಬೇಕು. ಪೋಷಕರಿಗೆ ಮತ್ತು ಶಾಲೆಗೆ ಕೀರ್ತಿ ತರಬೇಕು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಾದ ಶಿವಕುಮಾರ್ ಎಸ್.ಕೆ., ಮಂಜುಕುಮಾರ್ ಉಪಸ್ಥಿತರಿದ್ದರು.