ಪತ್ರಿಕಾ ಮಾಧ್ಯಮದಿಂದ ಬೌದ್ಧಿಕ ಶಕ್ತಿ ವೃದ್ಧಿ

KannadaprabhaNewsNetwork |  
Published : Aug 11, 2025, 12:31 AM IST
ಫೋಟೋ 8 ಎ, ಎನ್, ಪಿ 2 ಆನಂದಪುರ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಕನ್ನಡಪ್ರಭ ಪತ್ರಿಕೆಯು ಹೊರತಂದ ವಿದ್ಯಾರ್ಥಿ ಸಂಚಿಕೆಯನ್ನು  ಆನಂದಪುರ ಗ್ರಾಪಂ ಅಧ್ಯಕ್ಷ ಕೆ. ಗುರುರಾಜ್ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಇತ್ತೀಚೆಗೆ ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ದೃಶ್ಯ ಮಾಧ್ಯಮಗಳ ವೀಕ್ಷಣೆ ಹೆಚ್ಚುತ್ತಿದೆ. ಆದರೆ, ದೃಶ್ಯ ಮಾಧ್ಯಮ ನಮ್ಮ ಕಲ್ಪನೆಗಳನ್ನು ಬೆಳೆಸುವುದಿಲ್ಲ. ಕ್ರಿಯಾಶೀಲತೆಯನ್ನು ಹೆಚ್ಚಿಸಲು ಪತ್ರಿಕಾ ಮಾಧ್ಯಮದಿಂದ ಮಾತ್ರ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಆನಂದಪುರ ಗ್ರಾಪಂ ಅಧ್ಯಕ್ಷ ಕೆ.ಗುರುರಾಜ್ ಹೇಳಿದರು.

ಆನಂದಪುರ: ಇತ್ತೀಚೆಗೆ ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ದೃಶ್ಯ ಮಾಧ್ಯಮಗಳ ವೀಕ್ಷಣೆ ಹೆಚ್ಚುತ್ತಿದೆ. ಆದರೆ, ದೃಶ್ಯ ಮಾಧ್ಯಮ ನಮ್ಮ ಕಲ್ಪನೆಗಳನ್ನು ಬೆಳೆಸುವುದಿಲ್ಲ. ಕ್ರಿಯಾಶೀಲತೆಯನ್ನು ಹೆಚ್ಚಿಸಲು ಪತ್ರಿಕಾ ಮಾಧ್ಯಮದಿಂದ ಮಾತ್ರ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಆನಂದಪುರ ಗ್ರಾಪಂ ಅಧ್ಯಕ್ಷ ಕೆ.ಗುರುರಾಜ್ ಹೇಳಿದರು.

ಆನಂದಪುರದ ಕೆಪಿಎಸ್‌ ಶಾಲೆಯ ಸಭಾಂಗಣದಲ್ಲಿ ಕನ್ನಡಪ್ರಭ ಪತ್ರಿಕೆಯು ಹೊರತಂದ ವಿದ್ಯಾರ್ಥಿ ಸಂಚಿಕೆಯನ್ನು ಬಿಡುಗಳಿಸಿ ಅವರು ಮಾತನಾಡಿದರು.

ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸುಧಾರಣೆಗೆ ಕಾರಣವಾಗುವ ಪತ್ರಿಕಾರಂಗವು ಸಮಾಜಕ್ಕೆ ಅನಿವಾರ್ಯವಾಗಿದೆ. ಸಮಾಜದ ಕುಂದುಕೊರತೆಗಳನ್ನು ಸರ್ಕಾರಕ್ಕೆ ತಲುಪಿಸಿ ಸರ್ಕಾರದ ಕಣ್ಣು ತೆರೆಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸುತ್ತದೆ ಎಂದರು.

ದೃಶ್ಯ ಮಾಧ್ಯಮಗಳು ಬಂದ ಮೇಲೆ ಜನರ ಕಲ್ಪನೆ ಸಾಯುತ್ತಿವೆ. ಕೆಲವು ಕೆಟ್ಟ ಸಂಪ್ರದಾಯಗಳನ್ನು ಅವು ಹುಟ್ಟು ಹಾಕುತ್ತಿವೆ. ಆದರೆ, ಪತ್ರಿಕಾ ಮಾಧ್ಯಮ ಬೌದ್ಧಿಕ ಶಕ್ತಿಯನ್ನು ವೃದ್ಧಿಸುತ್ತದೆ. ವಿದ್ಯಾರ್ಥಿ ಜೀವನದಿಂದಲೇ ಪತ್ರಿಕೆಯನ್ನು ಓದಲು ಪ್ರಾರಂಭಿಸಿದರೆ ಹೊಸ ಹೊಸ ವಿಷಯಗಳು ನಮಗೆ ತಿಳಿಯುತ್ತದೆ. ಇದರಿಂದ ನಮ್ಮ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಜೊತೆಗೆ ಆಲೋಚನ ಶಕ್ತಿಯೂ ವೃದ್ಧಿಯಾಗುತ್ತದೆ ಎಂದರು.

ಪತ್ರಿಕೆಯು ಮಕ್ಕಳಿಗೆ ಓದುವ ಆಸಕ್ತಿ ಬೆಳೆಸುವ ಪ್ರಾಯೋಗಿಕ ವಸ್ತುವಾಗಿದೆ. ಹಾಗಾಗಿ ಶಾಲೆಗಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಹಿಂದೆ ಪತ್ರಿಕೆಗಳೇ ಮುಖ್ಯವಾಹಿನಿಯಲ್ಲಿದ್ದವು. ಇತ್ತೀಚೆಗೆ ಟಿವಿ ಮಾಧ್ಯಮ ಪರಿಣಾಮಕಾರಿಯಾಗಿ ಬೆಳೆದಿದೆ. ಆದರೂ, ಪತ್ರಿಕೆಗಳಿಗೆ ತನ್ನದೇ ಆದ ಸ್ಥಾನವಿದೆ ಎಂದು ಶ್ಲಾಘೀಸಿದರು.

ಶಾಲೆಯ ಉಪ ಪ್ರಾಚಾರ್ಯ ಈಶ್ವರಪ್ಪ ಮಾತನಾಡಿ, ಪತ್ರಿಕೆಗಳು ದೇಶ-ವಿದೇಶಗಳಲ್ಲಿ ನಡೆಯುವ ವಿದ್ಯಾಮಾನಗಳನ್ನು ಓದುಗರಿಗೆ ಅತ್ಯಂತ ಸುಲಭವಾಗಿ ಮತ್ತು ಜ್ಞಾನದ ಬೆಳಕನ್ನು ಪಸರಿಸುವ ಮಾರ್ಗಸೂಚಿಯಾಗಿದೆ. ಕನ್ನಡಪ್ರಭದ ವಿದ್ಯಾರ್ಥಿ ಸಂಚಿಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆಗಳು ಪ್ರತಿನಿತ್ಯ ಬರುತ್ತಿದೆ. ಈ ಪತ್ರಿಕೆಯನ್ನು ವಿದ್ಯಾರ್ಥಿಗಳು ಸಂಗ್ರಹಿಟ್ಟುಕೊಂಡರೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗುವಂತಹ ಕನ್ನಡಪ್ರಭ ವಿದ್ಯಾರ್ಥಿ ಸಂಚಿಕೆಯನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗ್ರಾಮ ಆಡಳಿತ ಕಾರ್ಯ ಸ್ವಾಗತಾರ್ಹ ಎಂದರು.

ಗ್ರಾಪಂ ಉಪಾಧ್ಯಕ್ಷೆ ರೂಪಲತಾ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಗಳನ್ನು ರೂಢಿಸಿಕೊಳ್ಳಲು ಅನುಕೂಲವಾಗುವ ವಿಚಾರಗಳನ್ನು ಕನ್ನಡಪ್ರಭ ದಿನಪತ್ರಿಕೆ ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹಾಗೂ ಅಗತ್ಯ ಮಾಹಿತಿಗಳನ್ನೊಳಗೊಂಡ ವಿಚಾರಗಳನ್ನು ಕ್ರೋಢಿಕರಿಸಿ ಕನ್ನಡಪ್ರಭ ಪತ್ರಿಕೆಯು ವಿದ್ಯಾರ್ಥಿ ಸಂಚಿಕೆಯನ್ನು ಹೊರತಂದಿದೆ. ಇದನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಶಂಕರ್, ಪಿಡಿಒ ಮಂಜುನಾಯಕ್, ಕೆಪಿಎಸ್‌ ಶಾಲೆ ಪ್ರಾಂಶುಪಾಲ ರವಿಶಂಕರ್, ಪ್ರಮುಖರಾದ ಶಾಂತ, ವನಜಾಕ್ಷಿ, ಗೋಪಿ, ಮಂಜುನಾಥ್ ಮತ್ತಿತರರಿದ್ದರು.

ಉತ್ತಮವಾದ ವಿಷಯ ಜನರಿಗೆ

ತಲುಪಿಸುತ್ತಿರುವ "ಕನ್ನಡಪ್ರಭ "

ಕನ್ನಡಪ್ರಭ ದಿನಪತ್ರಿಕೆ ತುಂಬಾ ಉತ್ತಮವಾದ ವಿಷಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಅದರ ಜೊತೆ ಜೊತೆಯಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದಂತಹ ವಿದ್ಯಾರ್ಥಿ ಸಂಚಿಕೆಯನ್ನು ಹೊರತಂದಿರುವುದು ತುಂಬಾ ಸಂತೋಷಕರವಾದ ವಿಚಾರ. ಆನಂದಪುರ ಗ್ರಾಪಂಯಿಂದ ಮಕ್ಕಳಿಗೆ ಉಚಿತವಾಗಿ ಪತ್ರಿಕೆಯನ್ನು ವಿತರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಗಜೇಂದ್ರ ಯಾದವ್ ಕರೆ ನೀಡಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ