ತವನಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಊಟ ಸೇವಿಸಿದ್ದ ಭಕ್ತರು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ತವನಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಊಟ ಸೇವಿಸಿದ ತವನಂದಿ ಹಾಗೂ ಬೆಟ್ಟದ ಸಾತೇನಹಳ್ಳಿ ಗ್ರಾಮದ ೧೬ ಜನರು ಅಸ್ವಸ್ಥಗೊಂಡು, ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆಗೆ ದಾಖಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರುದ್ರೇಶಪ್ಪರವರ ಕುಟುಂಬದ ೧೫ ಜನರು, ಅವರ ಮನೆದೇವರ ಪೂಜೆಗಾಗಿ ಜುಲೈ ೧೨ರ ಭಾನುವಾರ ತಾಲೂಕಿನ ಹಳೆಕೋಟೆ ಹೋಬಳಿ ತವನಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಬೆಳಗ್ಗೆ ದೇವರಿಗೆ ಅಭಿಷೇಕ ಹಾಗೂ ಪೂಜೆ ಮುಗಿಸಿದ್ದಾರೆ. ಮಧ್ಯಾಹ್ನ ದೇವಸ್ಥಾನದಲ್ಲಿ ಅಡುಗೆ ಮಾಡಿಸಿದ್ದು, ಊಟ ಸೇವಿಸಿದ ಬೆಟ್ಟದ ಸಾತೇನಹಳ್ಳಿ ಗ್ರಾಮದ ಮಹಾಲಿಂಗಪ್ಪ(೫೭), ಪಾಲಾಕ್ಷಮ್ಮ(೫೫), ಶಾಂತ ಮಲ್ಲಪ್ಪ(೬೦), ಸಂಗೀತ(೩೫), ಈರಾಜಮ್ಮ (೬೨) ಹಾಗೂ ವತನಂದಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪೂಜೆ ಮಾಡುವ ಪೂಜಾರಿಕೆ ಮನೆತನದವರಾದ ಪ್ರಕಾಶ್ (೫೫) ಯೋಗೇಶ್ (೪೫), ಸುಚಿತ್ರ (೪೦), ರತ್ನಮ್ಮ (೬೦), ಪರಿಣಿತ (೧೨), ಸುಕುಮಾರ್ (೫೦), ರೇಖಾ (೪೦), ಲಿಖಿತ (೧೭), ಭುವನ (೧೬), ಭಾಗ್ಯಮ್ಮ (೬೦) ಹಾಗೂ ರುದ್ರೇಶ (೪೦) ಇವರಲ್ಲಿ ಕೆಲವರಿಗೆ ಸೋಮವಾರ ಸಣ್ಣಪುಟ್ಟ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಹೋಗಿದ್ದರು. ಮಂಗಳವಾರ ಹೊಟ್ಟೆನೋವು ಜಾಸ್ತಿಯಾದರಿಂದ ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದು ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.