ಕನ್ನಡಪ್ರಭ ವಾರ್ತೆ ತಿಪಟೂರು
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹೋರಾಟಗಾರರನ್ನು ಹುರಿದುಂಬಿಸುವ ಉದ್ದೇಶದಿಂದ ವಂದೇಮಾತರಂ ಗೀತೆಯನ್ನು ರಚಿಸಿದ ಮಹಾನ್ ದೇಶಾಭಿಮಾನಿ ಬಂಕಿಮ ಚಂದ್ರ ಚಟರ್ಜಿ ಎಂದು ನಗರದ ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು. ನಗರದ ಎಸ್.ವಿ.ಪಿ. ಹಾಗೂ ಸುಮತಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ಬಂಕಿಮಚಂದ್ರ ಚಟರ್ಜಿರವರು ರಚಿಸಿದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂಭ್ರಮದ ದಿನವನ್ನು ಚಟರ್ಜಿ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬಡತನದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಚಟರ್ಜಿರವರು ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕೋಲ್ಕತ್ತದಲ್ಲಿ ಉನ್ನತ ಶಿಕ್ಷಣ ಪಡೆಯುವ ಜೊತೆಗೆ ಕಾನೂನು ಪದವಿ ಗಳಿಸಿಕೊಂಡಿದ್ದರು. ಜಿಲ್ಲಾಧಿಕಾರಿಯಾಗಿ ಸರ್ಕಾರಿ ಕೆಲಸ ನಿರ್ವಹಿಸುತ್ತಾ ಬ್ರಿಟಿಷರ ಆಡಳಿತ ವ್ಯವಸ್ಥೆಯನ್ನು ಗಮನಿಸುತ್ತಾ ಅನಂತರ ವಿರೋಧಿಸಲಿಕ್ಕೆ ತೊಡಗಿದರು. ವೃತ್ತಿಯಿಂದ ನಿವೃತ್ತಿಯಾಗಿ ಬ್ರಿಟಿಷರ ಆಡಳಿತದ ವಿರುದ್ಧ ತಿರುಗಿ ಬಿದ್ದು ರಾಷ್ಟ್ರ ಮಟ್ಟದಲ್ಲಿ ಹೋರಾಟಗಾರರನ್ನು ಸಂಘಟನೆ ಮಾಡುತ್ತಾ, ಅಭಿವೃದ್ಧಿಯಲ್ಲಿ ಸಕ್ರಿಯಗೊಳಿಸಲು ಪವಿತ್ರ ವಂದೇ ಮಾತರಂ ಗೀತೆಯನ್ನು ರಚಿಸಿದರು. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಈ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ರಚಿಸಿ, ಹಾಡಿಸಿ, ದೇಶದೆಲ್ಲೆಡೆ ಸಂಚರಿಸಿ ಸಂಚಲನ ಮೂಡಿಸಿ ಜನರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸಿದ ಶ್ರೇಷ್ಠ ರಾಷ್ಟ್ರನಾಯಕರಾಗಿ ಗುರುತಿಸಿಕೊಂಡರು. ಬ್ರಿಟಿಷರಿಗೆ ಇವರ ಹೋರಾಟ, ದೇಶಪ್ರೇಮವನ್ನು ಕಂಡು ಸಹಿಸಲಾಗದೇ ಸೇಡುತೀರಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬ್ರಿಟೀಷರಿಗೆ ಇವರ ಮೂಲ ಹೆಸರಾದ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಎಂಬುದನ್ನೇ ಸ್ಪಷ್ಟವಾಗಿ ಉಚ್ಚಾರಣೆ ಮಾಡಲಿಕ್ಕೆ ಬಾರದೆ ಬಂಕಿಮಚಂದ್ರ ಚಟರ್ಜಿ ಎಂದು ಕರೆಯಲು ಆರಂಭಿಸಿದರು. ಅಂದಿನಿಂದಲೂ ಈ ಹೆಸರೇ ಚಿರಪರಿಚಿತವಾಗಿ ಉಳಿದುಕೊಂಡು ಬಂದಿದೆ. ಇವರ ಹೋರಾಟದ ಜೊತೆಗೆ ಕಾದಂಬರಿ, ಪ್ರಬಂಧ ಲೇಖನಗಳು, ಕೃತಿಗಳನ್ನು ಬರೆಯುವುದರ ಮೂಲಕ ಪ್ರಸಿದ್ಧ ಪತ್ರಕರ್ತರೆಂತಲೂ ಕರೆಸಿಕೊಂಡರು. ಇಂತಹ ಅಪರೂಪದ ಸ್ವಾಭಿಮಾನಿ, ದೇಶಾಭಿಮಾನಿ, ರಾಷ್ಟ್ರಪ್ರೇಮಿಯಾಗಿದ್ದ ಚಟರ್ಜಿಯವರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಂಡು ರಾಷ್ಟ್ರದ ಸಂಪತ್ತುಗಳಾಗಬೇಕೆಂದರು. ಪ್ರೌಢಶಾಲಾ ದೈಹಿಕ ಶಿಕ್ಷಕ ಬಿ.ಆರ್. ಉದಯಶಂಕರ್ ಮಾತನಾಡಿ, ಚಟರ್ಜಿಯವರು ಚತುರತಾ ಕೌಶಲಗಳನ್ನು ಮೈಗೂಡಿಸಿಕೊಂಡು ರಾಷ್ಟ್ರದ ಏಳಿಗೆಗೆ ಭಾವನಾತ್ಮಕವಾದ ಗೀತರಚನೆಯೊಂದಿಗೆ ಸಂಘಟನೆಯನ್ನು ಮಾಡಿದ್ದರು. ಇವರ ಈ ಗೀತೆ ಹಾಗೂ ವಿಚಾರ ಧಾರೆಗಳಿಗೆ ಗಾಂಧೀಜಿ ಸೇರಿದಂತೆ ಹಲವಾರು ರಾಷ್ಟ್ರ ನಾಯಕರುಗಳು, ಸ್ವಾತಂತ್ರ್ಯ ಹೋರಾಟಗಾರರು ಪ್ರಭಾವಿತರಾಗಿ ದೇಶದೆಲ್ಲೆಡೆ ಇದರ ಮಹತ್ವವನ್ನು ಪ್ರಚಾರ ಮಾಡಿದ್ದರು. ಇಂತಹ ಆದರ್ಶವ್ಯಕ್ತಿಗಳ ವಿಚಾರಧಾರೆಗಳ ಹಾದಿಯಲ್ಲಿ ಯುವಪಡೆ ಸಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ವಂದೇಮಾತರಂ ಗೀತೆಯನ್ನು ಮಕ್ಕಳಿಂದ ಸಾಮೂಹಿಕವಾಗಿ ಹಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರುಗಳಾದ ವಿ.ಎಂ. ಅರ್ಕಚಾರಿ, ವಿಜಯಕುಮಾರಿ, ಶಿಕ್ಷಕರುಗಳಾದ ಪದ್ಮ ಪಿ. ವೀರೇಶ್, ಜುಂಜಪ್ಪ, ಬಸವರಾಜು, ದೇವರಾಜು, ಸಂತೋಷ್, ಸಿದ್ದೇಶ್, ಕುಮುದ, ವಸಂತ ಮತ್ತಿತರಿದ್ದರು.