- ಪ್ರಧಾನಿ ಬಳಿಗೆ ಸಿಎಂ ರೈತ ಮುಖಂಡರ ನಿಯೋಗ ಕೊಂಡೊಯ್ಯಲು ಆಗ್ರಹ ।
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಕಬ್ಬಿನ ಎಫ್ಆರ್‌ಪಿ ಅವೈಜ್ಞಾನಿಕವಾಗಿದೆ. ಸರ್ಕಾರವು ರಾಜ್ಯ ಸಲಹಾ ಬೆಲೆ ಕಾಯ್ದೆ ಪ್ರಕಾರ ಉಪ ಉತ್ಪನ್ನಗಳ ಲಾಭ ಲೆಕ್ಕ ಹಾಕಿ, ಹೆಚ್ಚುವರಿ ದರ ₹3500 ನಿಗದಿಪಡಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬಿನ ಬೆಲೆ ನಿಗದಿ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಳಿ ರೈತ ಮುಖಂಡರ ನಿಯೋಗ ಕೊಂಡೊಯ್ಯುವ ದಿಟ್ಟ ನಿರ್ಧಾರ ಕೈಗೊಳ್ಳಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಆ ಭಾಗದ ಪ್ರಭಾವಿ ರಾಜಕಾರಣಿಗಳು, ಸಚಿವರು, ಶಾಸಕರೇ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ಇದರಿಂದಾಗಿ ಸಿಎಂ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮಳೆ ಆಶ್ರಯದ ಬೆಳೆನಷ್ಟಕ್ಕೆ ಎಕರೆಗೆ ಕನಿಷ್ಠ ₹25 ಸಾವಿರ, ನೀರಾವರಿ ತೋಟಗಾರಿಕೆ ಬೆಳೆಗೆ ಕನಿಷ್ಟ ₹40 ಸಾವಿರ, ವಾಣಿಜ್ಯ ಬೆಳೆಗೆ ₹60 ಸಾವಿರ ಏರಿಸಿ, ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕು. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಮಳೆಹಾನಿ, ಪ್ರವಾಹ ಹಾನಿ, ರೈತರ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರವು ಪಂಜಾಬ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿದಂತೆ ಕರ್ನಾಟಕಕ್ಕೂ 5 ಸಾವಿರ ಕೋಟಿ ರು.ಗಳ ವಿಶೇಷ ಪ್ಯಾಕೇಜ್ ನೀಡಲಿ. ಈ ಬಗ್ಗೆ ರಾಜ್ಯದ ಸಮಸ್ತ ಸಂಸದರು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಅವರು ಆಗ್ರಹಿಸಿದರು.
ಹಸಿರು ಸೇನೆ ರಾಜ್ಯಾಧ್ಯಕ್ಷ ಕರಬಸಪ್ಪ ಗೌಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ರೈತ ಸಂಘದ ಹಿರಿಯ ಮುಖಂಡ ನಿಟುವಳ್ಳಿ ಅಂಜಿನಪ್ಪ ಪೂಜಾರ, ರಾಜ್ಯ ಉಪಾಧ್ಯಕ್ಷ ದೇವಕುಮಾರ, ಬರಡನಪುರ ನಾಗರಾಜ, ಮಲ್ಲಿಕಾರ್ಜುನ, ಬಸಪ್ಪ ಮೇಷ್ಟ್ರು, ಬಸವರಾಜಪ್ಪ ಹೊನ್ನತ್ತಿ, ಪರಶುರಾಮ ಇತರರು ಇದ್ದರು.
-7ಕೆಡಿವಿಜಿ2: