ಶಿವಕುಮಾರ ಕುಷ್ಟಗಿ
ಗದಗ: ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಸುರಿದ ವ್ಯಾಪಕ ಮಳೆಯಿಂದಾಗಿ ಹಾನಿ ಅನುಭವಿಸಿದ್ದ ರೈತರಿಗೆ ಸರ್ಕಾರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಈಗಾಗಲೇ ವಿತರಣಾ ಕಾರ್ಯವೂ ಪ್ರಾರಂಭವಾಗಿದ್ದು, ಶೇ. 75 ರೈತರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಯಾದ ಕೃಷಿ ಬೆಳಗೆ ರಾಜ್ಯ ಸರ್ಕಾರ ₹153 ಕೋಟಿಯನ್ನು ರೈತರಿಗೆ ಬೆಳೆ ಪರಿಹಾರವಾಗಿ ಬಿಡುಗಡೆ ಮಾಡಿದೆ. ಆಧಾರ್ ಜೋಡಣೆ, ರೈತರ ಸಾವು ಮತ್ತು ಇತರೆ ತಾಂತ್ರಿಕ ಕಾರಣಗಳಿಂದ ಶೇ. 25ರಷ್ಟು ರೈತರ ಬ್ಯಾಂಕ್ ಖಾತೆಗಳು ಪರಿಷ್ಕರಣೆ ಆಗಬೇಕಿದ್ದು, ತದ ನಂತರ ಇನ್ನುಳಿದ ರೈತರಿಗೆ ಪರಿಹಾರ ದೊರೆಯಲಿದೆ. ಸಧ್ಯಕ್ಕೆ ಶೇ. 75ರಷ್ಟು ವಿತರಣೆಯಾಗಿದೆ ಎನ್ನುತ್ತಿದೆ ಜಿಲ್ಲಾಡಳಿತ.
ವ್ಯಾಪಕ ಬೆಳೆ ಹಾನಿಪ್ರಸಕ್ತ ಸಾಲಿನ ಮುಂಗಾರು ಪೂರ್ವದಲ್ಲಿಯೇ (ಬೇಸಿಗೆ ಮಳೆ) ಪ್ರಾರಂಭವಾದ ಮಳೆ, ಆಗಸ್ಟ್ ಅಂತ್ಯದ ವರೆಗೂ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿತ್ತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಒಟ್ಟು 1.32 ಲಕ್ಷ ಹೆಕ್ಟೇರ್ ಬೆಳೆ ಎಂದು ಸಮೀಕ್ಷೆ ನಡೆಸಿ ಪ್ರಾಥಮಿಕ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಿತ್ತು. ವರದಿಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು, ಶೇಂಗಾ, ಹತ್ತಿ ಮತ್ತು ಮೆಕ್ಕೆಜೊಳ ಬೆಳೆಗಳು ಸೇರಿದಂತೆ ಇತರೆ ಕೃಷಿ ಬೆಳೆಗಳು ಒಟ್ಟು 1.21 ಲಕ್ಷ ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೋಮೋಟೊ, ಮೆಣಸಿನಕಾಯಿ, ಕ್ಯಾಬೇಜ್, ಬಾಳೆಹಣ್ಣು, ಪಪ್ಪಾಯ ಮತ್ತು ಬೆಂಡಿಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಸೇರಿ 11 ಸಾವಿರ ಹೆಕ್ಟೇರ್ ಸೇರಿದಂತೆ ಒಟ್ಟು 1.32 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ.
ಜಿಲ್ಲೆಯ 1.41 ಲಕ್ಷ ರೈತರಿಗೆ ಪರಿಹಾರ.ಪರಿಹಾರ ತಂತ್ರಾಂಶದ ಪ್ರಕಾರ ಜಿಲ್ಲೆಯಲ್ಲಿ 1.32 ಲಕ್ಷ ಹೆಕ್ಟೇರ್ ಬೆಳೆ ಪರಿಹಾರಕ್ಕೆ 1.41 ಲಕ್ಷ ರೈತರು ನೋಂದಣಿಯಾಗಿದ್ದು, ಅದರನ್ವಯ ₹153 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಪರಿಹಾರ ವಿತರಣೆಯಲ್ಲಿ ಕೆಲ ರೈತರ ದತ್ತಾಂಶಗಳನ್ನು ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆದರೆ, ಕೆಲ ರೈತರ ಆಧಾರ್ ಹೊಂದಾಣಿಕೆ ಸಮಸ್ಯೆ, ರೈತ ಸಾವು ಪ್ರಕರಣ, ಎಫ್‌ಐಡಿ ಮಾಡಿಸದಿರುವುದು, ಎಫ್ ಐಡಿ ಹೊಂದಾಣಿಕೆ ಆಗದಿರುವುದರಿಂದ ಇನ್ನುಳಿದ ರೈತರಿಗೆ ವಿತರಣೆಯಲ್ಲಿ ಸಮಸ್ಯೆಯಾಗುತ್ತಿದೆ. 1.42 ಲಕ್ಷ ಹೆಕ್ಟೇರ್ ಬಿತ್ತನೆ
ಜಿಲ್ಲಾ ಕೃಷಿ ಇಲಾಖೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 1.32 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಂಡಿತ್ತು. ಆದರೆ ಗುರಿಗಿಂತಲೂ ಅಧಿಕ (1.42 ಲಕ್ಷ ಹೆ) ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಪೂರ್ವ ಮುಂಗಾರಿನ ತೇವಾಂಶದಿಂದಾಗಿ ಎಲ್ಲೆಡೆ ಬೇಗನೇ ಬಿತ್ತನೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಸಹಜವಾಗಿಯೇ ಇಲಾಖೆಯ ಗುರಿ ಮೀರಿ 10 ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಗದಗ ಮತ್ತು ರೋಣದಲ್ಲಿ ಹೆಸರು ಬೆಳೆಗೆ ಅಧಿಕ ನಷ್ಟವಾಗಿದೆ. ರೋಣ ತಾಲೂಕಿನಲ್ಲಿ ಉಳ್ಳಾಗಡ್ಡಿ ಬೆಳೆಗೂ ವ್ಯಾಪಕ ಹಾನಿಯಾಗಿದೆ. ಜಿಲ್ಲೆ ಮುಂಚೂಣಿಗದಗ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಬಿಡುಗಡೆಯಾಗಿದ್ದು ವಿತರಣಾ ಕಾರ್ಯವೂ ಪ್ರಗತಿಯಲ್ಲಿದೆ. ಈ ವಿಷಯವಾಗಿ ನಿರಂತರ ಸಭೆಗಳನ್ನು ನಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಬೆಳೆ ಪರಿಹಾರ ವಿತರಣೆಯಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಮೂಂಚೂಣಿಯಲ್ಲಿದೆ. ಜಿಲ್ಲೆಗೆ ಇದುವರೆಗೆ ಒಟ್ಟು ₹153 ಕೊಟಿ ಹಣ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರಿಧರ ತಿಳಿಸಿದ್ದಾರೆ.