ಕನ್ನಡಪ್ರಭ ವಾರ್ತೆ, ತುಮಕೂರುಅನುದಾನಿತ ಶಾಲೆಗಳ ಉಳಿವಿಗೆ ನಾನು ಬದ್ಧನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ 1560 ಅನುದಾನಿತ ಶಾಲೆಗಳನ್ನು ಮುಚ್ಚಲಾಗಿದೆ. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ನೀಡದಿರುವುದು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದಾಗಿದೆ. ಹಾಗಾಗಿ ಈ ಬಗ್ಗೆ ತಾವು ಸಹ ಗಮನ ಹರಿಸಿದ್ದು, ಅನುದಾನಿತ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಈ ಶಾಲೆಗಳ ಜತೆ ನಾನು ಸದಾ ಇದ್ದೇನೆ ಎಂದರು.ಅವರು, ಈ ಹಿಂದೆ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಅನುದಾನಿತ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ನಾನು ಚರ್ಚೆ ಮಾಡಿದ್ದೇನೆ ಎಂದು ಅವರು ಹೇಳಿದರು.ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದಾಗ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಹಜವಾಗಿಯೇ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದಾಗಿ ಅನುದಾನಿತ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇನ್ನು ಮುಂದೆ ಇರುವ ಅನುದಾನಿತ ಶಾಲೆಗಳ ಉಳಿವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಪೂರ್ಣ ಪ್ರಮಾಣದಲ್ಲಿ ಖಾಸಗಿ ಶಾಲೆ, ಅನುದಾನಿತ ಶಾಲೆಗಳನ್ನು ಬೇಡ ಎಂದು ಸರ್ಕಾರದಿಂದಲೇ ಸರ್ಕಾರಿ ಶಾಲೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ಜತೆಗೆ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಕೊಡುಗೆ ಅಪಾರವಾಗಿದೆ ಎಂದರು.ಶಿಕ್ಷಣ ಕ್ಷೇತ್ರ ಖಾಸಗೀಕರಣವಾಗಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ೬ ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯಲು ನಿರ್ಣಯಿಸಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ 500 ರಿಂದ 600 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.ಅನುದಾನಿತ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ಭರ್ತಿ ಮಾಡಲು ಅವಕಾಶ ನೀಡಬೇಕು. ತದ ನಂತರ ಸರ್ಕಾರ ಗೈಡ್‌ಲೈನ್ಸ್ ಹೇರಬೇಕು. ಆಗ ಮಾತ್ರ ಅನುದಾನಿತ ಶಾಲೆಗಳಿಗೂ ಅನುಕೂಲವಾಗುತ್ತದೆ ಎಂದರು.ಅನುದಾನಿತ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು. ಇದಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಸರ್ಕಾರ ಒದಗಿಸುವ ಅಗತ್ಯವಿದೆ ಎಂದರು. ಎಷ್ಟೋ ಪ್ರೌಢಶಾಲೆಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಎಸ್ಸೆಸ್ಸೆಲ್ಸಿ - ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳ ಕುರಿತು ಸರ್ಕಾರಿ ಶಾಲೆ, ಅನುದಾನಿತ ಶಾಲೆಗಳ ಪ್ರತ್ಯೇಕವಾಗಿ ವಿವರ ಕೊಡುವಂತೆ ಅಧಿಕಾರಿಗಳನ್ನು ಕೇಳಿದ್ದೇನೆ. ಹಾಗೆಯೇ ಪಿಯು ಡಿಡಿಯವರಿಗೂ ಫಲಿತಾಂಶದ ವಿವರ ಕೊಡುವಂತೆ ತಿಳಿಸಿದ್ದೇನೆ ಎಂದರು.
ಅನುದಾನಿತ ಶಾಲೆಗಳಲ್ಲಿ 2015 ರಿಂದ ಇರುವ ಖಾಲಿ ಹುದ್ದೆಗಳನ್ನು ತುಂಬುವ ವಿಚಾರದಲ್ಲಿ ಹಿಂದಿನ ಸರ್ಕಾರದಲ್ಲಿ ಸಹ ಯಾವುದೇ ನಿಖರವಾದ ನಿರ್ಣಯ ಕೈಗೊಂಡಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು 15 ರಿಂದ 20 ಸಾವಿರ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.ಒಳ ಮೀಸಲಾತಿ ಅಂತಿಮವಾದ ಬಳಿಕ ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ಪಡೆಯುತ್ತೇವೆ. ಒಪಿಎಸ್‌ನಿಂದ ವಂಚಿತರಾಗಿದ್ದ 11300 ಜನ ಶಿಕ್ಷಕರನ್ನು ಈಗ ಒಪಿಎಸ್‌ಗೆ ಒಳಪಡಿಸಲಾಗಿದೆ. ಉಳಿದಂತೆ ಎನ್‌ಪಿಎಸ್‌ಗೆ ಒಳಪಡುತ್ತಿರುವ ಶಿಕ್ಷಕರ ಸೇರಿದಂತೆ ಎಲ್ಲ ಸರ್ಕಾರಿ ನೌಕರರನ್ನು ಒಪಿಎಸ್‌ಗೆ ಒಳಪಡಿಸುವ ಸಂಬಂಧ ಹೋರಾಟ ನಡೆಯುತ್ತಿದೆ ಎಂದರು. ವೆಬ್‌ಕಾಸ್ಟಿಂಗ್, ಫಲಿತಾಂಶ ವಿಚಾರವಾಗಿ ಸರ್ಕಾರ ಕೈಗೊಂಡಿರುವ ನಿರ್ಣಯ ಉತ್ತಮವಾಗಿದೆ. ಈಗ ಫಲಿತಾಂಶವೂ ಸುಧಾರಣೆಯಾಗುತ್ತಿದೆ ಎಂದರು.