ಕನ್ನಡಪ್ರಭ ವಾರ್ತೆ ಅರಸೀಕೆರೆ
ಕರ್ನಾಟಕದ ಚಿಕ್ಕ ತಿರುಪತಿಯೆಂದೇ ಪ್ರಸಿದ್ಧಿ ಪಡೆದಿರುವ ಹಾಸನ ಜಿಲ್ಲೆಯ ಅರಸೀಕೆರೆ ನಗರದಿಂದ ೨ ಕಿ.ಮೀ. ದೂರದಲ್ಲಿರುವ ಮಾಲೇಕಲ್ಲು ತಿರುಪತಿಯು ಪವಿತ್ರವಾದ ಯಾತ್ರಾಸ್ಥಳ ಮಾತ್ರವಲ್ಲದೆ ಪ್ರಕೃತಿ ಸೌಂದರ್ಯಗಳ ಪ್ರವಾಸಿ ತಾಣವೂ ಆಗಿದೆ.ರಾಜ್ಯದ ಬಹುಭಾಗಗಳ ಭಕ್ತರನ್ನು ಈ ಪುಣ್ಯಕ್ಷೇತ್ರ ನಗರದಿಂದ ಈಶಾನ್ಯ ಭಾಗದ ನಿಸರ್ಗ ವೈಭವಗಳೊಂದಿಗೆ ತಿರುಪತಿ ಗ್ರಾಮದಲ್ಲಿ ಗೋವಿಂದರಾಜಸ್ವಾಮಿ ಮಹಾಲಕ್ಷ್ಮೀ ನೆಲೆಸಿದ್ದಾರೆ. ಪ್ರತಿವರ್ಷದಂತೆ ಆಷಾಢ ದ್ವಾದಶಿ ದಿನದಂದು ಜು.7ರಂದು ವಿಜೃಂಭಣೆಯ ರಥೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗ ಭಾಗಳಿಂದ ೧ ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಲಿದ್ದು, ಅದರಲ್ಲೂ ನವ ವಧು-ವರರು ವಿಶೇಷವಾಗಿ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ತಪ್ಪದೇ ಪಡೆದು ಕಡಿದಾದ ೧೨೦೦ ಮೆಟ್ಟಿಲುಗಳನ್ನು ಹೊಂದಿರುವ ಮಾಲೇಕಲ್ ತಿರುಪತಿ ಬೆಟ್ಟವನ್ನು ಹತ್ತಿ ಬೆಟ್ಟದ ಮೇಲಿರುವ ಶ್ರೀನಿವಾಸ-ಮಹಾಲಕ್ಷ್ಮೀ ದೇವರ ದರ್ಶನ ಪಡೆದರೆ ಅವರ ಜೀವನ ಸುಖಕರವಾಗುವುದೆಂಬ ಪ್ರತೀತಿ ಇದೆ.ಪೃಕೃತಿಯ ಸೊಬಗಿನ ಮಡಿಲಲ್ಲಿ ಅಮರಗಿರಿಯು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ವಸಿಷ್ಠ ಮಹಾಋಷಿಗಳು ಶ್ರೀಮಾನ್ ನಾರಾಯಣನನ್ನು ಕುರಿತು ತಪ್ಪಸು ಮಾಡಿದ ಪುಣ್ಯಸ್ಥಳ. ಅವರು ಆಷಾಢ ಮಾಸದ ದ್ವಾದಶಿಯಂದು ಶ್ರೀಮಾನ್ ನಾರಾಯಣನ ದರ್ಶನ ಪಡೆದು ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.ಮಾಲೇಕಲ್ ಹೆಸರು:೮೦೦ ವರ್ಷಗಳ ಹಿಂದೆ ಈ ಪ್ರಾಂತ್ಯವನ್ನು ಆಳುತ್ತಿದ್ದ ಚಿತ್ರದುರ್ಗದ ಅರಸನು ಪಾಳೇಗಾರನಾದ ತಿಮ್ಮಪ್ಪ ನಾಯ್ಕನನ್ನು ತಮ್ಮ ಮನೆದೇವರಾದ ವೆಂಕಟರಮಣಸ್ವಾಮಿ ದರ್ಶನಕ್ಕಾಗಿ ದೊಡ್ಡ ತಿರುಪತಿಗೆ ಯಾತ್ರೆ ಕೈಗೊಳ್ಳುತ್ತಿದ್ದುದು ಪ್ರತಿವರ್ಷದ ವಾಡಿಕೆಯಾಗಿತ್ತು. ಆ ವರ್ಷ ಯಾತ್ರೆ ಮಾಡಲು ಸಾಧ್ಯವಾಗದೆ ಚಿಂತೆಯಲ್ಲಿ ಹೀಗಿರುವ ತಿರುಪತಿ ಬೆಟ್ಟದ ತಪ್ಪಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಶ್ರೀನಿವಾಸನು ಕನಸಿನಲ್ಲಿ ಕಾಣಿಸಿಕೊಂಡು ನಾನು ಇಲ್ಲಿಯೇ ದರ್ಶನ ಕೊಡುತ್ತೇನೆ. ಅದಕ್ಕಾಗಿ ನೀನು ಬೆಟ್ಟದ ಮೇಲೆ ತುಳಸಿ ಮಾಲೆ ಬಿದ್ದಿರುವಂತೆಯೇ ದಾರಿಯನ್ನು ಮಾಡಿಸಿ ಎಂದು ಆಜ್ಞಾಪಿಸಿದಂತೆ ಕನಸಿನಲ್ಲಿ ಭಾಸವಾಯಿತು. ಅದರಂತೆ ದಾರಿ ಮಾಡಿಸಿ ಮೆಟ್ಟಿಲುಗಳನ್ನು ನಿರ್ಮಿಸಿ ದೇವರ ದರ್ಶನ ಪಡೆದರೆಂದು ಹೇಳಲಾಗುತ್ತದೆ. ಆದ್ದರಿಂದಲೇ ಈ ಸ್ಥಳಕ್ಕೆ ಮಾಲೇಕಲ್ ತಿರುಪತಿ ಎಂದು ಹೆಸರು ಬಂತೆಂಬ ಪ್ರತೀತಿ ಇದೆ.ತಿಮ್ಮಪ್ಪನಾಯಕನು ಊರಿನ ಜನರ ಅನುಕೂಲಕ್ಕಾಗಿ ಇಲ್ಲಿಂದ ೨ ಕಿ.ಮೀ. ದೂರದ ಬೆಟ್ಟದಲ್ಲಿ ಕೆರೆಯನ್ನು ಕಟ್ಟಿಸಲು ಊರನ್ನು ಅಗೆದಾಗ ಕೆರೆಯ ಅಂಗಳದಲ್ಲಿ ಪೂರ್ಣ ಸಾಲಿಗ್ರಾಮದ ಶಿಲೆಯಿಂದ ಕೂಡಿದ ಶ್ರೀ ಗೋವಿಂದರಾಜಸ್ವಾಮಿ ವಿಗ್ರಹ ದೊರೆತಿದ್ದು ಆ ವಿಗ್ರಹವನ್ನು ತಂದು ಬೆಟ್ಟದ ತಪ್ಪಲಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿ ಮಹಾಲಕ್ಷ್ಮಿ ಅಮ್ಮನವರ ದೇವರನ್ನು ಪ್ರತಿಷ್ಟಾಪಿಸಲಾಗಿದ್ದು, ಕೆಂಚರಾಯಸ್ವಾಮಿ, ಬೆಟ್ಟದ ಬಾಗಿಲ ಬಳಿ ಭಕ್ತಗ್ರೇಸರ ಆಂಜನೇಯ ಸ್ವಾಮಿ ದೇವಾಲಯವಿದೆ. ನಂತರ ಮಹಾಮಂಟಪವಿದ್ದು ಅಮ್ಮನವರ ಆಭರಣ ಪೆಟ್ಟಿಗೆ ಆದಿಶೇಷನ ವಿಗ್ರಹ, ಅಮ್ಮನವರ ಪಾದಿಕೆಗಳು ಕಂಡುಬರುತ್ತವೆ.ಚಿಕ್ಕ ತಿರುಪತಿ ಬೆಟ್ಟ ಹಾಸನ ಜಿಲ್ಲೆಯ ಪ್ರಸಿದ್ಧ ತಾಣ ಬೆಟ್ಟ ಚಾರಣಕ್ಕೂ ಪ್ರಸಿದ್ಧಿ, ಬಾಗಿಲ ಆಂಜನೇಯ ದೇವಾಲಯ, ಗುಂಡಮ್ಮ ದೇವಾಲಯ,ಕೋಡಿಗಲ್ಲು, ಕೆಂಚರಾಯಸ್ವಾಮಿ ದೇವಾಲಯ ಗೋವಿಂದರಾಜಸ್ವಾಮಿದೇವಾಲಯ, ಪುಷ್ಕರಣಿ ಆಕರ್ಷಣೆಗಳು ಇದ್ದು ರಾಜ್ಯದ ಪ್ರವಾಸಿ ಕ್ಷೇತ್ರವೂ ಆಗಿದೆ. ಅತ್ಯಂತ ಹಿಂದುಳಿದ ಈ ಕ್ಷೇತ್ರವನ್ನು ಕಳೆದ ೪-೫ ವರ್ಷದಿಂದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಅಲ್ಲದೆ. ಇತ್ತೀಚಿಗೆ ದಾನಿಗಳಾದ ಶ್ರೀಧರ್ ಮೂರ್ತಿ ಎಂಬುವವರು ಕಲ್ಯಾಣಿಯ ಬಳಿ ಕೋಟ್ಯಂತರ ರು. ವೆಚ್ಚದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳನ್ನು ನವೀನ ರೀತಿಯಲ್ಲಿ ಮಾಡಿಸಿ ಅದಕ್ಕೆ ಆಧುನಿಕ ಶೈಲಿಯ ಟಚ್ ಕೊಟ್ಟಿರುವುದು ಭಕ್ತರ ಗಮನ ಸೆಳೆಯುತ್ತಿದೆ ಇದು ಬಿ ದರ್ಜೆಯ ಮುಜರಾಯಿ ದೇವಾಲಯವಾಗಿದೆ.
ಜಾತ್ರೆ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಅರಸೀಕೆರೆ ಘಟಕದವರು ಅರಸೀಕೆರೆಯಿಂದ ಮಾಲೇಕಲ್ಲು ತಿರುಪತಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿರುತ್ತಾರೆ.ಸೌಲಭ್ಯಗಳ ಕೊರತೆ:ಈ ಹಿಂದೆ ಮಂಟಪ ನಿರ್ಮಿಸಿದ್ದರೂ ಆದರೆ ಜಾತ್ರೆ ಸಂದರ್ಭದಲ್ಲಿ ಕಿರಿದಾದ ಮಂಟಪಗಳು ಕುಸಿದು ಅವಘಡವಾದನಂತರ ಮಂಟಪಗಳನ್ನು ತೆರೆವುಗೊಳಿಸಲಾಗಿತ್ತು. ಬೆಟ್ಟ ಹತುವಾಗ ಆಯಾಸವಾದರೆ ವಿಶ್ರಾಂತಿ ಪಡೆಯಲು ಆಶ್ರಯಿಸುತ್ತಿದ್ದ ಮಂಟಪ(ತಂಗುತಾಣ)ಗಳು ಕೆಲವು ವರ್ಷಗಳ ಹಿಂದೆ ಗೋಪುರ ಕುಸಿದು ಭಾರಿ ಅನಾಹುತ ಸಂಭವಿಸಿದ್ದು, ಆ ನಂತರದ ದಿನಗಳಲ್ಲಿ ಪುನಃ ಆ ಜಾಗದಲ್ಲಿ ವಿಶಾಲವಾದ ತಂಗುತಾಣ ನಿರ್ಮಿಸಿಲ್ಲ. ಬೆಟ್ಟ ಹತ್ತುವ ಭಕ್ತಾದಿಗಳು ಬಿಸಿಲಿನಲ್ಲೆ ಕುಳಿತು ಕೊಳುವಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿದ ಯಾತ್ರಿ ನಿವಾಸ ಕಾಮಗಾರಿ ಪೂರ್ಣಗೊಂಡು ೧೬ ವರ್ಷಗಳೇ ಕಳೇದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ರಾಜಗೋಪುರ ನಿರ್ಮಾಣ ಸಂಪೂರ್ಣವಾಗಿ ಮೂರು ವರ್ಷಗಳೇ ಕಳೆದರೂ ಇದನ್ನು ಉದ್ಘಾಟಿಸುವ ಮನಸ್ಸು ಶಾಸಕರು ಉದ್ಘಾಟನೆ ಮಾಡದೇ ಇರುವುದು ದುರ್ದೈವದ ಸಂಗತಿ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆಯಾಗಿದೆ.