ಚಂದ್ರು ಕೊಂಚಿಗೇರಿ
ತುಂಗಭದ್ರಾ ನದಿ ತೀರದಲ್ಲಿ ನಿರ್ಮಾಣಗೊಂಡ ಕೆಲವು ಏತ ನೀರಾವರಿ ಯೋಜನೆಗಳ ಜಾಕ್‌ವೆಲ್‌ಗಳಿಗೆ ನೀರೇ ಇಲ್ಲ. ನದಿ ಹರಿವಿನಲ್ಲೂ ಬಹಳಷ್ಟು ನೀರು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಏತ ನೀರಾವರಿ ಯೋಜನೆಗಳು ಆರಂಭಿಸಿಲ್ಲ.
ತಾಲೂಕಿನ ಹರವಿ-303 ಹೆಕ್ಟೇರ್, ಹರವಿ ಬಸಾಪುರ-223 ಹೆಕ್ಟೇರ್, ಲಿಂಗನಾಯಕನಹಳ್ಳಿ-81 ಹೆಕ್ಟೇರ್, ಕುರುವತ್ತಿ-121 ಹೆಕ್ಟೇರ್, ಮೈಲಾರ-(1) 807 ಹೆಕ್ಟೇರ್, ಮೈಲಾರ- (2) 607 ಹೆಕ್ಟೇರ್, ಚಿಕ್ಕ ಬನ್ನಿಮಟ್ಟಿ-152 ಹೆಕ್ಟೇರ್, ನಂದಿಗಾವಿ-141 ಹೆಕ್ಟೇರ್, ಬ್ಯಾಲಹುಣ್ಸಿ-152 ಹೆಕ್ಟೇರ್, ಮಕರಬ್ಬಿ-222 ಹೆಕ್ಟೇರ್, ಕೋಟಿಹಾಳ್-56 ಹೆಕ್ಟೇರ್, ನವಲಿ-244 ಹೆಕ್ಟೇರ್, ಕೊಂಬಳಿ-303 ಹೆಕ್ಟೇರ್, ಅಂಕ್ಲಿ-304 ಹೆಕ್ಟೇರ್, ಹಕ್ಕಂಡಿ-122 ಹೆಕ್ಟೇರ್ ಪ್ರದೇಶ ಅಚ್ಚುಕಟ್ಟು ಹೊಂದಿವೆ. ಆದರೆ ಯೋಜನೆಗಳ ಸಮರ್ಪಕ ನಿರ್ವಹಣೆ ಇಲ್ಲ. ಕಾಟಾಚಾರಕ್ಕೆ ನೀರು ಗಂಟಿಯನ್ನು ನಿಯೋಜಿಸುತ್ತಾರೆ. ರೈತರಿಗೆ ಆಸರೆಯಾಗಬೇಕಾದ ಯೋಜನೆಗಳು ಸಂಪೂರ್ಣ ಹಾಳಾಗಿ ಹೋಗಿವೆ.ಬಹುತೇಕ ಏತ ನೀರಾವರಿ ಯೋಜನೆಗಳ ಕೆರೆಯಂಗಳ ಸ್ವಚ್ಛತೆಯೇ ಇಲ್ಲ. ಕೆರೆಗೆ ನೀರು ಹರಿಯುವ ಜಾಗದಲ್ಲೇ ದೊಡ್ಡ ಪ್ರಮಾಣದ ಗಿಡ- ಮರಗಳು ಬೆಳೆದು ನಿಂತಿವೆ. ಕಾಲುವೆಗಳು ಸಂಪೂರ್ಣ ಹಾಳಾಗಿವೆ. ಯೋಜನೆಗಳ ನೀರು ಹರಿಸಲು ಅಳವಡಿಸಿದ್ದ ಸಿಮೆಂಟ್ ಪೈಪ್‌ಗಳು ಕಿತ್ತು ಹಾಕಿದ್ದಾರೆ. ಕಾಲುವೆಗಳನ್ನು ಸಂಪೂರ್ಣ ಮುಚ್ಚಿ ಹಾಕಿದ್ದಾರೆ. ಒಟ್ಟಾರೆ ನಿರ್ವಹಣೆ ಕೊರತೆ ಕಾಡುತ್ತಿದೆ.
ಏತ ನೀರಾವರಿ ಯೋಜನೆಗಳು ಹೆಸರಿಗೆ ಮಾತ್ರ ಇವೆ. ನದಿ ತುಂಬಿ ಹರಿಯುತ್ತಿದ್ದರೂ ಕೆರೆಗೆ ನೀರು ತುಂಬಿಸಿ, ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರುಣಿಸುತ್ತಿಲ್ಲ ಎನ್ನುತ್ತಾರೆ ಬ್ಯಾಲಹುಣ್ಸಿ ನಿವಾಸಿ ಲಕ್ಷ್ಮಣ ಬಾರ್ಕಿ.