ತಿಪ್ಪೇಗುಂಡಿಯಂತಾದ ಸಿರಿಗೇರಿಯ ಪುರಾತನ ಕೆರೆ

KannadaprabhaNewsNetwork |  
Published : Jun 18, 2026, 02:15 AM IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಪುರಾತನ ಕಾಲದ ಕೆರೆ ಕಸ ತುಂಬಿಕೊಂಡಿದೆ. | Kannada Prabha

ಸಾರಾಂಶ

ಪುರಾತನ ಕಾಲದ ಐತಿಹಾಸಿಕ ಮಹತ್ವದ ಕೆರೆ ತಿಪ್ಪೇಗುಂಡಿಯಂತಾಗಿದೆ.

ಎನ್.ಪಂಪನಗೌಡ ಬಾದನಹಟ್ಟಿ

ಕುರುಗೋಡು: ತಾಲೂಕಿನ ಪುರಾತನ ಕಾಲದ ಐತಿಹಾಸಿಕ ಮಹತ್ವದ ಕೆರೆ ತಿಪ್ಪೇಗುಂಡಿಯಂತಾಗಿದೆ. ಸಮೀಪದ ಸಿರಿಗೇರಿ ಗ್ರಾಮದ ಹೃದಯ ಭಾಗದಲ್ಲಿರುವ ಪುರಾತನ ಕಾಲದ ಕೆರೆಯು ತ್ಯಾಜ್ಯ ಹಾಗೂ ಗಿಡ-ಗಂಟಿ ಬೆಳೆದು ಬಿಡಾಡಿ ದನ, ಹಂದಿ, ನಾಯಿಗಳ ಆಶ್ರಯ ತಾಣವಾಗಿದೆ.

ಗ್ರಾಮದ ನಿವಾಸಿಗಳು ಕೆರೆಗೆ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ದಾರಿಹೋಕರು, ಸುತ್ತಲಿನ ನಿವಾಸಿಗಳು, ಕೂಗಳತೆ ದೂರದ ಅಂಗನವಾಡಿ ಕೇಂದ್ರದ ಮಕ್ಕಳು ನಿತ್ಯ ದುರ್ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಸಾಲದಿದ್ದಕ್ಕೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸರಿಸೃಪಗಳ ಉಪಟಳದಿಂದ ಶಾಲಾ-ಕಾಲೇಜಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ವಚ್ಛತೆ ಮರೀಚಿಕೆಯಾಗಿರುವ ಈ ಪ್ರದೇಶದಲ್ಲಿ ಮೂರು ವರ್ಷದ ಹಿಂದೆ ಮಳೆ ನೀರು ಸಂಗ್ರಹವಾಗಿದ್ದ ಗುಂಡಿಯಲ್ಲಿ ಇಬ್ಬರು ಮಕ್ಕಳು ಬಿದ್ದು ಅಸುನೀಗಿದ ಅವಘಡವೂ ನಡೆದಿತ್ತು. ಗುಂಡಿ ಮುಚ್ಚುವಂತೆ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪುರಾತನ ಕಾಲದ ಕೆರೆ ಅಭಿವೃದ್ಧಿ ಮಾಡುವುದು ಸೇರಿದಂತೆ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎನ್ನುತ್ತಾರೆ ವಕೀಲ ರಾಮ್‌ಬಾಬು.

ಕೆರೆಯಲ್ಲಿ ಕಸ-ಕಡ್ಡಿ, ತ್ಯಾಜ್ಯ ಎಸೆಯುವುದರಿಂದ ದುರ್ವಾಸನೆ ಬೀರುತ್ತಿದೆ. ಕೆರೆ ಸ್ವಚ್ಛಗೊಳಿಸಿ, ತಂತಿ ಕಂಬವನ್ನು ಅಳವಡಿಸಬೇಕು. ಶಾಸಕರು ಕೂಡಲೇ ಅನುದಾನ ಒದಗಿಸಿ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಸಿರಿಗೇರಿ ಗ್ರಾಪಂ ಮಾಜಿ ಸದಸ್ಯ ಗೋಡೆ ಚೆನ್ನಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವೀಟ್ ಅಂಗಡಿಯ ಸಹೋದರರ ನಡುವೆ ವಾಗ್ವಾದ: ಚಾಕುನಿಂದ ಇರಿತ
ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ