16 ವರ್ಷ ಪೂರ್ಣ: ಕುಡಚಿ ರೈಲು ಮಾರ್ಗ ಅಪೂರ್ಣ!

KannadaprabhaNewsNetwork |  
Published : May 22, 2026, 03:15 AM IST
ಲೋಕಾಪುರ | Kannada Prabha

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿ ರಾಜ್ಯದ ಆರ್ಥಿಕ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿ ರಾಜ್ಯದ ಆರ್ಥಿಕ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಬಾಗಲಕೋಟೆಯಿಂದ ಕುಡಚಿವರೆಗಿನ ೧೪೨ ಕಿ.ಮೀ ಉದ್ದದ ರೈಲ್ವೆ ಮಾರ್ಗದ ಕಾಮಗಾರಿಗೆ ೨೦೧೧ ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇಲ್ಲಿಯವರೆಗೆ 38 ಕಿಮೀ ಮಾತ್ರ ಪೂರ್ಣಗೊಂಡಿದೆ. ೧೦೪ ಕಿ.ಮೀ ಕಾಮಗಾರಿ ಬಾಕಿ ಇದೆ.

ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಸ್ವಾಧಿನದ ವೆಚ್ಚ ಹಾಗೂ ಕಾಮಗಾರಿಯ ಶೇ.೫೦ ರಷ್ಟು ವೆಚ್ಚ ಭರಿಸುವ ವಾಗ್ದಾನದೊಂದಿಗೆ ಕೇಂದ್ರದ ಸಹಯೋಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ಮಾಡಿಕೊಡಬೇಕಾದ ರಾಜ್ಯದ ಅಧಿಕಾರಿಗಳ ವಿಳಂಬದಿಂದಾಗಿ ಕಾಮಗಾರಿಗೆ ವೇಗ ಸಿಗುತ್ತಿಲ್ಲ.

ಈ ಮಾರ್ಗ ಪೂರ್ಣಗೊಂಡರೆ ಸಿಮೆಂಟ್, ಲೈಮ್ ಸ್ಟೋನ್, ಸಕ್ಕರೆ ಸಾಗಾಣಿಕೆ ಸರಳವಾಗಲಿದ್ದು ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ರಾಜ್ಯದ ನಿರ್ಲಕ್ಷದಿಂದಾಗಿ ಈ ಮಾರ್ಗ ನಿರ್ಮಾಣದ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದಿಲ್ಲ. ರೈಲ್ವೆ ಮಾರ್ಗ ನಿರ್ಮಿಸಲು ಒಟ್ಟು ೨,೪೬೦ ಎಕರೆ ಭೂಮಿ ಬೇಕಿದ್ದು, ಬಹುತೇಕ ಭೂಮಿ ಸ್ವಾಧೀನಗೊಂಡಿದೆ. ಆದರೆ, ಸ್ವಾಧೀನಪಡಿಸಿಕೊಂಡು ಭೂಮೀಯ ಮಾಲೀಕರು ನ್ಯಾಯಾಲಗಳ ಮೊರೆ ಹೋಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಭೂ ಸ್ವಾಧೀನಕ್ಕೆ ₹೩೬೫ ಕೋಟಿ, ಬೆಳಗಾವಿ ಜಿಲ್ಲೆಗೆ ₹೧೬೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ೧೪೨ ಕಿ.ಮೀ ಮಾರ್ಗದ ಕಾಮಗಾರಿಗೆ ೨೦೧೦-೧೧ ರಲ್ಲಿ ₹೯೮೬ ಕೋಟಿ ವೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ಅದರ ಮೊತ್ತ ₹೩,೧೨೮ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಶೇ.೩೯ ರಷ್ಟು ಭೌತಿಕ ಪ್ರಗತಿಯಾಗಿದ್ದರೆ, ಶೇ.೩೦ ರಷ್ಟು ಆರ್ಥಿಕ ಪ್ರಗತಿಯಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಿದೆ. ದಾದನಟ್ಟಿ-ಯಾದವಾಡ ನಡುವಿನ ೧೫ ಕಿ.ಮೀ ಮಾರ್ಗದಲ್ಲಿ ಬರುವ ಒಂಭತ್ತು ಸಣ್ಣ ಸೇತುವೆ, ಏಳು ಕೇಳಸೇತುವೆ, ಒಂದು ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಯಾದವಾಡ-ಜಮಖಂಡಿ ನಡುವೆ ಶೇ.೯೬ ರಷ್ಟು ಜಮಖಂಡಿ-ಜಗದಾಳ ನಡುವೆ ಶೇ.೯೩ ರಷ್ಟು, ಜಗದಾಳ-ಹಾರೂಗೇರಿ ನಡುವಿನ ಶೇ.೯೧ ರಷ್ಟು ಹಾಗೂ ಹಾರೂಗೇರಿ-ಕುಡಚಿ ನಡುವೆ ಶೇ.೯೦ ರಷ್ಟು ಭೂಸ್ವಾಧಿನ ಆಗಿದೆ. ಲೋಕಾಪುರದಿಂದ ಯಾದವಾಡವರೆಗಿನ ೨೧ ಕಿ.ಮೀ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.

ಕೆಲ ತಿಂಗಳುಗಳ ಹಿಂದೆ ರೈಲ್ವೆ ಮಾರ್ಗ ವೀಕ್ಷಣೆಗೆ ಬಂದಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ೨೦೨೭ರ ಹೊತ್ತಿಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದಿದ್ದರು. ಆದರೆ, ಈಗ ನಡೆದಿರುವ ಕಾಮಗಾರಿ ವೇಗೆ ನೋಡಿದರೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ಈಗಾಗಲೇ ಸರಕು ಸಾಗಣೆಗೆಯ ಗೂಡ್ಸ್ ರೈಲು ಸಂಚಾರ ಆರಂಭಗೊಂಡಿದೆ. ಆದರೆ, ೨೦೨೫ ಮಾರ್ಚನಿಂದ ಆರಂಭಗೊಳ್ಳಲಿದೆ ಎಂದು ಸಚಿವರೇ ಹೇಳಿದ್ದ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊAಡಿಲ್ಲ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ರೈಲು ಸಂಚಾರ ಕೂಡ ಆರಂಭಿಸಬೇಕು ಎಂಬ ಕೂಗಿಗೆ ಮನ್ನಣೆ ಸಿಕ್ಕಿಲ್ಲ.

ನೆನೆಗುದಿಗೆ ಬಿದ್ದು ಶತಮಾನದ ಅಂಚಿಗೆ ಬಂದು ನಿಂತ ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಇನ್ನೂ ಯಾವಾಗ ಸಮಯ ಕೂಡಿಬರುತ್ತದೆಯೋ ಗೊತ್ತಾಗುತ್ತಿಲ್ಲ.

ರ್ಕಾರಕ್ಕೆ ವಿವಿಧ ಸಂಘಟನೆಗಳ ಎಚ್ಚರಿಕೆ: ರೈಲ್ವೆ ಇಲಾಖೆಗೆ ಪ್ರಥಮವಾಗಿ ಪ್ಯಾಸೆಂಜರ್‌ ರೈಲು ಪ್ರಾರಂಭಿಸಲು ಮನವಿ ಮಾಡಲಾಗಿದೆ. ರೈಲ್ವೆ ಇಲಾಖೆ ಮೊಂಡ ಸ್ವಭಾವ ಬಿಟ್ಟು ಜಿಲ್ಲೆಯ ಜನರ ಅಪೇಕ್ಷೆಯಂತೆ ಪ್ಯಾಸೆಂಜರ್‌ ರೈಲು ಪ್ರಾರಂಭಿಸಿ ನಂತರ ಸರಕು ಸಾಗಾಣಿಕೆ ವ್ಯವಹಾರ ನಡೆಸುವುದು ಒಳ್ಳೆಯದು. ಇಲ್ಲದಿದ್ದರೇ ಹೋರಾಟ ಸಮಿತಿಯು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪಕ್ಷಾತಿತ ಹೋರಾಟ ಮಾಡಿ ರೈಲ್ವೆ ಇಲಾಖೆಗೆ ಬಿಸಿ ತಟ್ಟಿಸಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹಿರಿಯ ನಾಗರಿಕರ ವೇದಿಕೆಯಿಂದ ಒತ್ತಾಯ: ಬಾಗಲಕೋಟೆ- ಮೈಸೂರು (ಬಸವ ಎಕ್ಸ್‌ಪ್ರೆಸ್‌) ರೈಲನ್ನು ಲೋಕಾಪುರ ರೈಲು ನಿಲ್ದಾಣದಿಂದಲೇ ಆರಂಭಿಸಬೇಕು. ಇದರಿಂದ ಲೋಕಾಪುರ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಬೆಂಗಳೂರು ಆಸ್ಪತ್ರೆ, ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ಪುಣ್ಯಕ್ಷೇತ್ರಗಳಿಗಾಗಿ ತೆರಳುವವರಿಗೆ ಅನುಕೂಲ, ಮೈಸೂರಿನಿಂದ ಬಾಗಲಕೋಟೆ ಬೆಳಗ್ಗೆ ೧೧.೧೫ಕ್ಕೆ ರೈಲು ಬರುತ್ತದೆ. ಮಧ್ಯಾಹ್ನ ೨.೨೦ ಮರಳಿ ಹೋಗುತ್ತದೆ ಆ ನಡುವೆ ೩ ಗಂಟೆ ಸಮಯವಿರುವುದರಿಂದ ಲೋಕಾಪುರವರೆಗೆ ವಿಸ್ತರಿಸಬೇಕೆಂದು ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.

ಬಾಗಲಕೋಟೆ-ಲೋಕಾಪುರ ನಡುವೆ ಡೆಮೊ ರೈಲು ಆರಂಭಿಸುವ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಆರಂಭವಾಗಿಲ್ಲ. ಬಾಗಲಕೋಟೆ-ಲೋಕಾಪುರ ಮಾತ್ರ ಆರಂಭಿಸಿದರೇ ಉಪಯೋಗವಿಲ್ಲ, ದೂರದ ಊರುಗಳಿಗೂ ಸಂಪರ್ಕ ಕಲ್ಪಿಸಬೇಕು. ರೈಲ್ವೆ ಮಾರ್ಗ ಶೀರ್ಘ ಪೂರ್ಣಗೊಳ್ಳಬೇಕು. ಇದು ಈಡೇರುವವರೆಗೆ ಹೋರಾಟ ನಿಲ್ಲದು.

-ಕುತುಬುದ್ಧೀನ್ ಖಾಜಿ, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು-ದೆಹಲಿ ವಿಮಾನಎಂಜಿನ್‌ನಲ್ಲಿ ಬೆಂಕಿ ಅವಘಡ
ಪಾಲಿಕೆಯಲ್ಲಿ ಕನ್ನಡಿಗರ ಅಸ್ಮಿತೆಗೆ ಮತ್ತೊಂದು ಅಗ್ನಿಪರೀಕ್ಷೆ!