ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರ ಮತ್ತೊಮ್ಮೆ ಬೆಳಗಾವಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರ ಮತ್ತೊಮ್ಮೆ ಬೆಳಗಾವಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಯ ಕೇಂದ್ರ ಬಿಂದುವಾಗಿದೆ. ಆದರೆ ಈ ಬಾರಿ ವಿವಾದದ ಕೇಂದ್ರಬಿಂದು ಮಹಾರಾಷ್ಟ್ರದ ಹಕ್ಕು ಮಂಡನೆ ಇಲ್ಲವೇ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವಲ್ಲ. ಬದಲಾಗಿ, ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕನ್ನಡಪರ ನಿರ್ಣಯದ ಕುರಿತು ಚರ್ಚೆಗೆ ಅವಕಾಶವಿಲ್ಲ ಎಂದು ವ್ಯಕ್ತವಾದ ಕಾನೂನು ಅಭಿಪ್ರಾಯದ ಅಂಶವೇ ಈ ಹೊಸ ವಿವಾದಕ್ಕೆ ಕಾರಣವಾಗಿದೆ.

ಈ ಹೇಳಿಕೆಯ ಬಳಿಕ ಕನ್ನಡಪರ ಸಂಘಟನೆಗಳು, ಕಾನೂನು ತಜ್ಞರು ಹಾಗೂ ಹಲವು ಸಾರ್ವಜನಿಕ ವಲಯದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಕಾನೂನು ವ್ಯಾಖ್ಯಾನದ ವಿಷಯವಲ್ಲ. ಕನ್ನಡಿಗರ ಸ್ವಾಭಿಮಾನ ಮತ್ತು ಗಡಿನಾಡಿನ ಅಸ್ತಿತ್ವದ ಪ್ರಶ್ನೆಯೂ ಹೌದು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಸಂವಿಧಾನದ 131ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆ ದಾಖಲಿಸಿರುವುದು ಸತ್ಯ. ಬೆಳಗಾವಿ ಸೇರಿದಂತೆ ಗಡಿ ಭಾಗಗಳ ಮೇಲೆ ಹಕ್ಕು ಸಾಧಿಸುವ ಉದ್ದೇಶದಿಂದ ಈ ದಾವೆ ಸಲ್ಲಿಸಲಾಗಿತ್ತು. ಆದರೆ ಪ್ರಕರಣ ದಾಖಲಾಗಿರುವುದರಿಂದಲೇ ಅದು ಸಂಪೂರ್ಣ ವಿಚಾರಣೆಗೆ ಸ್ವೀಕೃತವಾಗಿದೆ ಅಥವಾ ಆ ವಿಷಯದ ಬಗ್ಗೆ ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಚರ್ಚೆ ನಡೆಸಬಾರದು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಗಡಿತಜ್ಞ ಹಾಗೂ ಹಿರಿಯ ವಕೀಲ ರವೀಂದ್ರ ತೋಟಿಗೇರ ಸ್ಪಷ್ಟಪಡಿಸಿದ್ದಾರೆ.

ಮೊದಲು ಈ ಪ್ರಕರಣ ವಿಚಾರಣಾರ್ಹವೇ, ಸುಪ್ರೀಂ ಕೋರ್ಟ್‌ಗೆ ಈ ವಿಷಯದಲ್ಲಿ ನ್ಯಾಯವ್ಯಾಪ್ತಿ ಇದೆಯೇ ಎಂಬ ಪ್ರಶ್ನೆಗಳು ನಿರ್ಧಾರವಾಗಬೇಕಿದೆ. ಕರ್ನಾಟಕ ಸರ್ಕಾರವೂ ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಆಕ್ಷೇಪಣೆ ಸಲ್ಲಿಸಿದೆ. ಹೀಗಿರುವಾಗ ಸುಪ್ರೀಂ ಕೋರ್ಟ್ ಪೂರ್ಣ ವಿಚಾರಣೆಗೆ ಪ್ರಕರಣ ಸ್ವೀಕರಿಸಿದೆ ಎನ್ನುವುದು ವಾಸ್ತವ ಸ್ಥಿತಿಯ ಸಂಪೂರ್ಣ ಚಿತ್ರಣವಲ್ಲ ಎಂದು ಹೇಳಿದ್ದಾರೆ.

ಮಹಾಜನ್ ವರದಿ ಮರೆತವರಾರು?: ಗಡಿ ವಿವಾದದ ಚರ್ಚೆಯಲ್ಲಿ ಮಹಾಜನ್ ಆಯೋಗದ ವರದಿ ಮಹತ್ವದ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರ ನೇಮಿಸಿದ್ದ ಈ ಆಯೋಗವು ಸುದೀರ್ಘ ಅಧ್ಯಯನದ ಬಳಿಕ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕು ಎಂದು ಶಿಫಾರಸು ಮಾಡಿತ್ತು. ಕರ್ನಾಟಕ ಸರ್ಕಾರ ಈ ವರದಿಯನ್ನು ಒಪ್ಪಿಕೊಂಡಿದ್ದು, ಮಹಾರಾಷ್ಟ್ರ ಮಾತ್ರ ಅದನ್ನು ತಿರಸ್ಕರಿಸಿದೆ.

ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಪ್ರಶ್ನೆಯೂ ಇದೇ. ಮಹಾಜನ್ ವರದಿ ಕರ್ನಾಟಕದ ಪರವಾಗಿದ್ದಾಗ, ಪಾಲಿಕೆ ಸಭೆಯಲ್ಲಿ ಅದನ್ನು ಏಕೆ ಪ್ರಸ್ತಾಪಿಸಲಿಲ್ಲ? ಕರ್ನಾಟಕದ ಅಧಿಕೃತ ನಿಲುವನ್ನು ಏಕೆ ಉಲ್ಲೇಖಿಸಲಿಲ್ಲ? ಯಾವ ಕಾನೂನು ದಾಖಲೆ ಆಧರಿಸಿ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಲಾಯಿತು ಎಂಬ ಪ್ರಶ್ನೆಗಳನ್ನು ಅವರು ಮುಂದಿಟ್ಟಿದ್ದಾರೆ.

ಪಾಲಿಕೆಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಇದೆಯೇ?:ಇದೀಗ ಚರ್ಚೆಯ ಕೇಂದ್ರವಾಗಿರುವ ಮತ್ತೊಂದು ಪ್ರಶ್ನೆ ಪಾಲಿಕೆಗೆ ಇಂತಹ ನಿರ್ಣಯ ಅಂಗೀಕರಿಸುವ ಅಧಿಕಾರ ಇದೆಯೇ ಎಂಬುದು. ಕರ್ನಾಟಕ ಪೌರ ನಿಯಮಗಳ ಅಧಿನಿಯಮ 1976ರ ಅನುಸೂಚಿ 1ರ ಕಲಂ 42ರ ಅಡಿಯಲ್ಲಿ ಪಾಲಿಕೆ ತನ್ನ ಅಭಿಪ್ರಾಯವನ್ನು ನಿರ್ಣಯದ ಮೂಲಕ ವ್ಯಕ್ತಪಡಿಸಲು ಅವಕಾಶವಿದೆ. ರಾಜ್ಯ ಪುನರ್‌ವಿಂಗಡಣಾ ಕಾಯ್ದೆ 1956ರಲ್ಲೇ ಬೆಳಗಾವಿ ಕರ್ನಾಟಕದ ಭಾಗ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದ್ದರಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆ ಅಂಗೀಕರಿಸಲು ಯಾವುದೇ ಕಾನೂನು ತೊಡಕು ಇಲ್ಲ ಎಂದು ಗಡಿತಜ್ಞ ಹಾಗೂ ಹಿರಿಯ ವಕೀಲ ರವೀಂದ್ರ ತೋಟಿಗೇರ ಅವರ ಅಭಿಪ್ರಾಯ.

ಬಿಜೆಪಿಯೊಳಗಿನ ಭಿನ್ನಮತವೇ?: ಈ ವಿವಾದದ ರಾಜಕೀಯ ಆಯಾಮವೂ ಗಮನ ಸೆಳೆಯುತ್ತಿದೆ. ಒಂದು ಕಡೆ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ಅವರು ಬೆಳಗಾವಿ ಕರ್ನಾಟಕದಲ್ಲೇ ಇದೆ. ಅಗತ್ಯ ಬಿದ್ದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನೊಂದೆಡೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮೇಯರ್‌, ಉಪ ಮೇಯರ್‌ ಹಾಗೂ ಕನ್ನಡಪರ ಸಂಘಟನೆಗಳ ಸಭೆ ಕರೆಯುವುದಾಗಿ ಹೇಳಿದ್ದಾರೆ. ಇದು ಕನ್ನಡಪರ ಸಂಘಟನೆಗಳಲ್ಲಿ ಆಶಾಭಾವನೆ ಮೂಡಿಸಿದೆ.

ಪಾಲಿಕೆ ಸಾಮಾನ್ಯ ಸಭೆಯಲ್ಲೇ ಮೇಯರ್‌ ಪ್ರೀತಿ ಕಾಮಕರ ಅವರು ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ನಿಲುವು ಎಚ್ಚರಿಕೆಯ ರಾಜಕೀಯ ನಡೆಯಾಗಿ ಕಾಣುತ್ತಿದೆ.

ಕನ್ನಡಿಗರ ಆತ್ಮಗೌರವದ ಪ್ರಶ್ನೆ:ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ರಾಜ್ಯ ಪುನರ್‌ವಿಂಗಡಣಾ ಕಾಯ್ದೆಯ ಮೂಲಕವೇ ನಿರ್ಧಾರಗೊಂಡಿರುವ ಸಾಂವಿಧಾನಿಕ ವಾಸ್ತವ. ಆದರೂ ಪ್ರತಿಯೊಂದು ಗಡಿ ವಿವಾದದ ಸಂದರ್ಭದಲ್ಲೂ ಈ ವಿಷಯವನ್ನು ಮರುಪ್ರತಿಪಾದಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದೆ ಕಾರಣಕ್ಕೆ ಕನ್ನಡಪರ ಸಂಘಟನೆಗಳು ಪಾಲಿಕೆಯ ನಿರ್ಣಯವನ್ನು ಕೇವಲ ಆಡಳಿತಾತ್ಮಕ ಕ್ರಮವಾಗಿ ನೋಡದೆ, ಕನ್ನಡಿಗರ ಅಸ್ತಿತ್ವ ಮತ್ತು ಆತ್ಮಗೌರವದ ಪ್ರತೀಕವಾಗಿ ಪರಿಗಣಿಸುತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯದ ಪ್ರಶ್ನೆ ಈಗ ಕಾನೂನು ಚರ್ಚೆಯನ್ನೂ ಮೀರಿ ರಾಜಕೀಯ ಸಂಕಲ್ಪ, ಆಡಳಿತದ ನಿಲುವು ಮತ್ತು ಗಡಿನಾಡಿನ ಕನ್ನಡಿಗರ ಭಾವನೆಗಳ ಪರೀಕ್ಷೆಯಾಗಿ ಪರಿಣಮಿಸಿದೆ.