ಫೆ. 6ರಿಂದ 17ನೇ ಆವೃತ್ತಿಯ ‘ಕೈಗಾ ಬರ್ಡ್ ಮ್ಯಾರಥಾನ್‌’

KannadaprabhaNewsNetwork |  
Published : Oct 30, 2026, 02:45 AM IST
ಸಾಂದರ್ಭಿಕ ಚಿತ್ರ.  | Kannada Prabha

ಸಾರಾಂಶ

ದೇಶದ ವಿವಿಧ ಭಾಗಗಳಿಂದ 50 ಮಂದಿ ಹೊರಗಿನ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದವರನ್ನು ಎನ್ಪಿಸಿಐಎಲ್‌ನ ಆಂತರಿಕ ಸಿಬ್ಬಂದಿ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಯ್ಕೆ ಮಾಡಲಾಗುತ್ತದೆ.

ಕಾರವಾರ: ಪಶ್ಚಿಮ ಘಟ್ಟಗಳ ಪಕ್ಷಿ ವೈವಿಧ್ಯವನ್ನು ಅನ್ವೇಷಿಸುವ ಉದ್ದೇಶದಿಂದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಕೈಗಾ ಘಟಕದ ವತಿಯಿಂದ 17ನೇ ಆವೃತ್ತಿಯ ‘ಕೈಗಾ ಬರ್ಡ್ ಮ್ಯಾರಥಾನ್’ ಅನ್ನು 2027ರ ಫೆ. 6 ಮತ್ತು 7ರಂದು ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳ ಪಕ್ಷಿವೀಕ್ಷಕರು ಕಾತರದಿಂದ ಕಾಯುವ ಈ ಕಾರ್ಯಕ್ರಮವು ಕೈಗಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ.

ಭಾರತದ ಕಾರ್ಪೊರೇಟ್ ಸಂಸ್ಥೆಯೊಂದರಿಂದ ಸತತವಾಗಿ 16 ವರ್ಷಗಳಿಗೂ ಹೆಚ್ಚು ಕಾಲ ಆಯೋಜಿಸಿಕೊಂಡು ಬರುತ್ತಿರುವ ವಿಶಿಷ್ಟ ಪಕ್ಷಿ ಸಮೀಕ್ಷೆಗಳಲ್ಲಿ ಕೈಗಾ ಬರ್ಡ್ ಮ್ಯಾರಥಾನ್ ಪ್ರಮುಖವಾಗಿದೆ. ಈ ಹಿಂದಿನ ಸಮೀಕ್ಷೆಗಳಲ್ಲಿ ಕೈಗಾ ಪ್ರದೇಶದಲ್ಲಿ ಸುಮಾರು 315 ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಬಾರಿ ಇನ್ನಷ್ಟು ಪ್ರಭೇದಗಳನ್ನು ದಾಖಲಿಸುವ ನಿರೀಕ್ಷೆಯಿದೆ.

ಹಿಂದಿನ ಆವೃತ್ತಿಗಳಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ವಿಜ್ಞಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಪಕ್ಷಿಪ್ರೇಮಿಗಳು ಭಾಗವಹಿಸಿದ್ದರು. ಈ ಬಾರಿಯೂ ಪಕ್ಷಿಗಳ ವೈವಿಧ್ಯತೆ ಮತ್ತು ಅವುಗಳ ವಾಸಸ್ಥಾನಗಳ ಕುರಿತು ಮಾಹಿತಿ ಸಂಗ್ರಹಿಸುವುದಕ್ಕೆ ಒತ್ತು ನೀಡಲಾಗಿದೆ.

ಭಾಗವಹಿಸುವವರ ಅನುಭವ ಮತ್ತು ಪರಿಣತಿಯ ಆಧಾರದ ಮೇಲೆ ಅವರನ್ನು 9 ತಂಡಗಳಾಗಿ ವಿಂಗಡಿಸಲಾಗುತ್ತದೆ. ಈ ತಂಡಗಳು ನಿಗದಿತ ಪ್ರದೇಶಗಳಲ್ಲಿ ಪಕ್ಷಿವೀಕ್ಷಣೆ ನಡೆಸಿ, ಅಲ್ಲಿನ ಪಕ್ಷಿ ಪ್ರಭೇದಗಳನ್ನು ಗುರುತಿಸಿ ದಾಖಲಿಸಲಿವೆ. ಎರಡು ಪೂರ್ಣ ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವು ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ಕೈಗಾ ಪ್ರದೇಶದ ಜೀವವೈವಿಧ್ಯವನ್ನು ಅರಿಯಲು ಪಕ್ಷಿವೀಕ್ಷಕರಿಗೆ ಉತ್ತಮ ಅವಕಾಶ ಒದಗಿಸಲಿದೆ.

ದೇಶದ ವಿವಿಧ ಭಾಗಗಳಿಂದ 50 ಮಂದಿ ಹೊರಗಿನ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದವರನ್ನು ಎನ್ಪಿಸಿಐಎಲ್‌ನ ಆಂತರಿಕ ಸಿಬ್ಬಂದಿ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಯ್ಕೆ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಪ್ರಕ್ರಿಯೆ 2026ರ ಅ. 22ರಿಂದ ಆರಂಭವಾಗಿದ್ದು, ನ. 30ರಂದು ಮುಕ್ತಾಯಗೊಳ್ಳಲಿದೆ. ಆಸಕ್ತರು ನೋಂದಣಿ ಅರ್ಜಿ https://drive.google.com/file/d/1W2kP1wfi8pzghoGu5UvlmyBHgxeYyLK/view?usp=drivesdk ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ birdingkaiga@gmail.com ಇ- ಮೇಲ್‌ಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9448999751, 8277120019 ಅಥವಾ 9448991753 ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು