ಒಂದೇ ರಾತ್ರಿ ಏಕಾಏಕಿ ಸುರಿದ 180ಮಿಮೀ ಮಳೆಗೆ ಜನ ಹೈರಾಣ

KannadaprabhaNewsNetwork | Published : Jun 13, 2024 12:54 AM

ಸಾರಾಂಶ

ಬಸವಕಲ್ಯಾಣ: ಅಟ್ಟೂರ, ಕೋಹಿನೂರ ಕೆರೆಗಳು ಒಡೆದು ಅಪಾರ ಹಾನಿ. ರೈತರ ಹೊಲಗಳಿಗೆ ನೀರು ನುಗ್ಗಿ ಕೊಚ್ಚಿಹೋದ ಫಲವತ್ತಾದ ಮಣ್ಣು. ಸ್ಥಳಕ್ಕೆ ಶಾಸಕ ಶರಣು ಸಲಗರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭೇಟಿ

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ತಾಲೂಕಿನ ಕೋಹಿನೂರ ಹೋಬಳಿ ಅಟ್ಟೂರ ಗ್ರಾಮದ ಸಣ್ಣ ಕೆರೆಯು ಸತತ ಮಳೆಯಿಂದಾಗಿ ಬಿರುಕು ಬಿಟ್ಟು 60 ಮೀಟರ್‌ಗೂ ಅಗಲ ಒಡೆದಿರುವುದರಿಂದ ಕೆರೆಯ ಕೆಳಗಡೆ ಇರುವ ಹೊಲಗದ್ದೆಗಳಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋದ ಘಟನೆ ಮಂಗಳವಾರ ರಾತ್ರಿ ಜರುಗಿದೆ.

ಮಂಗಳವಾರ ಒಂದೇ ರಾತ್ರಿ ಏಕಾಏಕಿ ಸುರಿದ 180ಮಿಮೀ ಮಳೆಗೆ ಜನರು ಹೈರಾಣಾಗಿದ್ದು, ಗ್ರಾಮದ ಸುಮಾರು 30 ಬಾವಿಗಳು ತುಂಬಿವೆ. ಅಲ್ಲಿಯ ವಿದ್ಯುತ್‌ ಮೋಟಾರ ಸಹ ಮುಳುಗಿದ್ದು ರೈತರು ಬಿತ್ತಿದ ಹೊಲಗಳಲ್ಲಿನ ಬೀಜ, ಗೊಬ್ಬರ ಕೊಚ್ಚಿಕೊಂಡು ಹೋಗಿವೆ.

ಅಟ್ಟೂರ್‌ನಿಂದ ತಾಂಡಾಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಹೀಗಾಗಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್‌ ಕಂಬಗಳು ಕೊಚ್ಚಿ ಹೋಗಿರುವುದರಿಂದ ಎರಡು ಗ್ರಾಮಗಳಿಗೆ ವಿದ್ಯುತ್‌ ಸ್ಥಗಿತಗೊಂಡು ಪರದಾಡುವಂತಾಗಿದೆ.

ಕೊಹಿನೂರ್‌ ಕೆರೆಯು 30ಮೀಟರ್‌ ಅಗಲ ಒಡೆದು ಅಪಾರ ಪ್ರಮಾಣದ ನೀರು ಹೊಲಗಳಿಗೆ ಹರಿದು ಹೋಗಿ ಬಹಳಷ್ಟು ಹಾನಿಯಾಗಿದೆ. ಈ ಕುರಿತು ಕಂದಾಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಸಮೀಕ್ಷೆಯಲ್ಲಿ ತೊಡಗಿದ್ದಾರೆ.

ಕೋಹಿನೂರ ಹೋಬಳಿಯಲ್ಲಿ ಕೊಹಿನೂರ ವಾಡಿ, ಸರಜವಳಗಾ, ಲಾಡವಂತಿ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ 12ಗಂಟೆಯಿಂದ ಬೆಳಗಿನ ಜಾವ 4 ಗಂಟೆಯ ವರೆಗೆ 180ಎಂಎಂ ಮಳೆಯಾಗಿದ್ದು ಅನೇಕ ಗ್ರಾಮಗಳ ಹಳ್ಳ ಕೊಳ್ಳಗಳು ತುಂಬಿ ಹರೆಯುತ್ತ ರೈತರ ಹೊಲಗಳಿಗೆ ನೀರು ನುಗ್ಗಿವೆ. ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ. ಇದಕ್ಕೆ ಅಂಟಿಕೊಂಡಿರುವ ಗೊಂಧಾರಿ ನಾಲಾ ತುಂಬಿ ಹರಿಯುತ್ತಿದೆ ರಾತ್ರಿ ಏಕಾಏಕಿ ಮಳೆ ಸುರಿದಿರುವುದರಿಂದ ಅನಾಹುತಕ್ಕೆ ಕಾರಣವಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ತರಹದ ಜೀವ ಹಾನಿಯಾಗಿಲ್ಲ.ಶಾಸಕ ಶರಣು ಸಲಗರ ಭೇಟಿ :

ಕ್ಷೇತ್ರದ ಶಾಸಕ ಶರಣು ಸಲಗರ ಅವರು ಸುದ್ದಿ ತಿಳಿದ ತಕ್ಷಣ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಕೆರೆ, ರಸ್ತೆ ಒಡೆದ ಸ್ಥಳ ಪರಿಶೀಲಿಸಿದರು. ಸಂಬಂಧಿತ ಇಲಾಖೆ ಅಧಿಕಾರಿಗಳಾದ ತಹಸೀಲ್ದಾರ್‌ ಶಾಂತನಗೌಡ, ಸಣ್ಣ ನೀರಾವರಿ ಅಧಿಕಾರಿ ಅನೀಲಕುಮಾರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಧನರಾಜ ಚವ್ಹಾಣ್‌ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭೇಟಿ:

ಬುಧವಾರ ಸಂಜೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರು, ತಹಸೀಲ್ದಾರ್‌ ಸಣ್ಣ ನೀರಾವರಿ ಇಲಾಖೆ, ಲೋಕೊಪಯೋಗಿ ಇಲಾಖೆ, ಜಿ.ಪಂ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ವೀಕ್ಷಿಸಿ ಈ ಕುರಿತು ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಈಜು ಕೋಳದಂತಾದ ಬಸವಕಲ್ಯಾಣ ಬಸ್‌ ನಿಲ್ದಾಣ:

ಇಡೀ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಸವಕಲ್ಯಾಣ ನಗರ ಬಸ್‌ ನಿಲ್ದಾಣ ಈಜು ಕೊಳದಂತಾಗಿದೆ. ಇದರಿಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ನಿಂತಲ್ಲೆ ನಿಂತ ಮಳೆ ನೀರಿನಿಂದ ವಾಹನ ಸವಾರರು ಹಾಗೂ ಸಾರ್ವಜನಿಕರ ಪರದಾಡುತ್ತಿದ್ದು, ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸುತ್ತಿಲ್ಲ ಎಂದು ಹೇಳಲಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.ತುಂಬಿ ಹರಿಯುತ್ತಿರುವ ಮಾಂಜ್ರಾ ನದಿ:

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಕೊಂಗಳಿ ಏತ ನೀರಾವರಿ ಯೋಜನೆ ಬಾಂದಾರ ಸೇತುವೆ ಬಾಗಿಲು ತೆರೆಯದ ಹಿನ್ನೆಲೆ ರೈತರ ಜಮೀನಿಗೆ ನೀರು ನುಗ್ಗಿವೆ. ಹುಲಸೂರು ಪಟ್ಟಣದ ಹೊರವಲಯದಲ್ಲಿ ಕೊಂಗಳಿ ಏತ ನೀರಾವರಿ ಯೋಜನೆಯ ಬಾಂದಾರ ಸೇತುವೆ ನಿರ್ಮಿಸಲಾಗಿದೆ. ಮಾಂಜ್ರಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ, ಕೊಂಗಳಿ, ಜಾಮಖಂಡಿ, ವಾಂಜರಖೇಡ, ಹುಲಸೂರು ಗ್ರಾಮದ ರೈತರ ಜಮೀನಿಗೆ ನೀರು ನುಗ್ಗಿವೆ. ಕೊಂಗಳಿ ಬಾಂದಾರ ಸೇತುವೆಯ ಬಾಗಿಲು ತೆರೆಯದ ಕಾರಣ ರೈತರ ಜಮೀನಿಗೆ ನೀರು ನುಗ್ಗಿದೆ ಎಂದು ರೈತರು ಆಕ್ರೋಶಗೊಂಡಿದ್ದಾರೆ.ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದ ಕೆರೆಯೂ ಬಿರುಕು ಬಿಟ್ಟಿದ್ದು ಅದು ಒಡೆಯಬಹುದು ಎಂದು ಈ ಹಿಂದೆಯೇ ರೈತರು ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳ ನಿರ್ಲಕ್ಷತನದಿಂದ ಕೆರೆ ಒಡೆದು ಬಿತ್ತನೆ ಮಾಡಿದ್ದ ಜಮೀನು ಜಲಾವೃತ್ತಗೊಂಡು ಅಪಾರ ಹಾನಿಯಾಗಿದೆ ಎಂದು ಆರೋಪಿಸಲಾಗುತ್ತಿದೆ.

Share this article