ಸದೃಢ ಆರೋಗ್ಯಕ್ಕೆ ಯೋಗ ಸಹಕಾರ: ಯೋಧ ದುರ್ಗಪ್ಪ

KannadaprabhaNewsNetwork | Published : Jun 13, 2024 12:54 AM

ಸಾರಾಂಶ

ಶಹಾಪುರ ನಗರದ ಫಕೀರೇಶ್ವರ ಮಠದ ಆವರಣದಲ್ಲಿ ಏಳು ದಿನಗಳರವರೆಗೆ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಿಎಸ್‌ಎಫ್ ಯೋಧ ದುರ್ಗಪ್ಪ ನಾಯಕ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಯೋಗವು ನಮ್ಮ ಜೀವನಕ್ಕೆ ಅತೀ ಅವಶ್ಯ. ಕ್ರಿಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಮಹರ್ಷಿಯವರ ಚಿಂತನೆಯ ಫಲವಾದ ಯೋಗವು ಕೇವಲ ಶಾಸ್ತ್ರವಾಗದೇ ಆಚರಣೆ, ಅಭ್ಯಾಸವಾಗಿ ಇಲ್ಲಿಯ ತನಕ ಬೆಳೆದು ಬಂದಿದೆ. ಶಹಪುರದಲ್ಲಿ ಕಳೆದ 30 ವರ್ಷಗಳಿಂದ ಯೋಗಾಚಾರ್ಯ ನರಸಿಂಹ ವೈದ್ಯ ಅವರ ತಂಡ ಉಚಿತವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಬಿಎಸ್‌ಎಫ್ ಯೋಧ ದುರ್ಗಪ್ಪ ನಾಯಕ ಸಗರ ತಿಳಿಸಿದರು.

ನಗರದ ಫಕೀರೇಶ್ವರ ಮಠದ ಆವರಣದಲ್ಲಿ ಏಳು ದಿನಗಳವರೆಗೆ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಿತ್ಯ ಬೆಳಿಗ್ಗೆ ಅರ್ಧ ಗಂಟೆ ಯೋಗ ಅಭ್ಯಾಸ ಮಾಡಿದ್ದಲ್ಲಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮಾನಸಿಕವಾಗಿ ದೈಹಿಕವಾಗಿ ಸದೃಢತೆ ಬರಲಿದೆ. ಆರೋಗ್ಯ ಬದುಕಿಗೆ ಅತಿ ಮುಖ್ಯವಾಗಿದೆ ಎಂದರು.

ಜಗತ್ತಿನ ಮೂಲೆ ಮೂಲೆಗಳಲ್ಲಿ ಕೇಳಿ ಬರುತ್ತಿರುವ ಮೊದಲ ಪಾಠ ಯೋಗವಾಗಿದೆ. ಯೋಗದಿಂದ ಮನಸ್ಸು ಸಕಾರಾತ್ಮಕ ಚಿಂತನೆಯತ್ತ ಸಾಗುತ್ತದೆ. ಮನಸ್ಸು ಸಕಾರಾತ್ಮಕ ಚಿಂತನೆ ಮಾಡಿದಷ್ಟು ನಮ್ಮ ಶರೀರ ಬಲಗೊಳ್ಳುತ್ತದೆ. ಮನಸ್ಸಿನ ಏಕಾಗ್ರತೆಗೆ ಯೋಗ ಮುಖ್ಯ ಸಾಧನ. ಮನುಷ್ಯನ ಉತ್ತಮ ಆರೋಗ್ಯ ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಬಹು ಮುಖ್ಯವಾಗಿದೆ ಎಂದರು.

ನಮ್ಮ ಋಷಿಮುನಿಗಳ ಕೊಡುಗೆಯಾದ ಅದ್ಭುತ ಯೋಗವನ್ನು ಅದರಲ್ಲೂ ಸಾಮೂಹಿಕವಾಗಿ ಯೋಗ ಅಭ್ಯಾಸ ನಡೆಸಿದ್ದಲ್ಲಿ ಆ ಸ್ಥಳದಲ್ಲೊಂದು ಅದ್ಭುತ ಶಕ್ತಿ ಜಾಗೃತವಾಗಲಿದೆ. ಹೀಗಾಗಿ ಪ್ರತಿಯೊಬ್ಬರು ಯೋಗ ಅಭ್ಯಾಸ ಮಾಡಿಕೊಂಡು ಉತ್ತಮ ಬದುಕಿನ ಜತೆಗೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಶ್ರೀಮಠದ ಗುರುಪಾದ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ಶರಣಗೌಡ ಪಾಟೀಲ್ ಮಾತನಾಡಿದರು. ಹಿರಿಯ ವಕೀಲರಾದ ರಾಯಣ್ಣ ಹೊನ್ನಾರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೊಲೀಸ್ ಇಲಾಖೆಯ ಮಹೇಶ ಬಿದರಿ, ಅಮರೇಶ ದೇಸಾಯಿ, ಆನಂದ ಜೈನ್, ಸಂಗೀತ ಶಿಕ್ಷಕ ಚಂದ್ರು ಗೋಗಿ, ಮಲ್ಲಯ್ಯ ಹಿರೇಮಠ, ಉಪಸ್ಥಿತರಿದ್ದರು. ಯೋಗಾಚಾರ್ಯ ನರಸಿಂಹ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕ ವೀರೇಶ ಉಳ್ಳಿ ನಿರೂಪಿಸಿದರು. ಸಾಂಸ್ಕೃತಿಕ ಸಂಘಟಕ ಸಂಗನಗೌಡ ಪಾಟೀಲ್ ಅನವಾರ ವಂದಿಸಿದರು.

ಜ್ಞಾನಾಮೃತ ಶಿಕ್ಷಣ ಸೇವಾ ಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ಮತ್ತು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯಕ್ರಮ ಆಯೋಜನೆ ಮಾಡಿತ್ತು.

Share this article