ಕನ್ನಡಪ್ರಭ ವಾರ್ತೆ ಮಡಿಕೇರಿ
ತಮಗೆ ವಿದ್ಯೆ ಕಲಿಸಿದ ಉಪನ್ಯಾಸಕ ವೃಂದದವರಿಗೆ ವಂದಿಸಿದ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು.
ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ.ಡಾ.ಬಿ.ರಾಘವ, ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿ, ಕಳಚಿಹೋದ ಸಂಬಂಧವನ್ನು ಬೆಸೆಯುವತ್ತ ಐತಿಹಾಸಿಕ ಹೆಜ್ಜೆ ಇರಿಸಿದ 1999-2002ನೇ ವಾಣಿಜ್ಯ ಬ್ಯಾಚ್‌ನ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಇದು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶವಾಗಲಿದೆ ಎಂದು ಬಣ್ಣಿಸಿದರು.ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ದೇವಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳದ ಇಂದಿನ ದಿನಗಳಲ್ಲಿ, ಒಂದು ನಿರ್ದಿಷ್ಟ ಬ್ಯಾಚ್‌ನ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರನ್ನು ಕೃತಜ್ಞತಾಪೂರ್ವಕವಾಗಿ ವಂದಿಸಿರುವ ಕಾರ್ಯ ಕಾಲೇಜಿನ ಇತಿಹಾಸದ ಪುಟಗಳಲ್ಲಿ ದಾಖಲಿಸುವಂತದ್ದು ಎಂದು ತಿಳಿಸಿದರು.
ಉಪನ್ಯಾಸಕರ ಮಾರ್ಗದರ್ಶನದ ಫಲಶೃತಿಯಾಗಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, 1949ರಿಂದ ಇದೇ ಮೊದಲ ಬಾರಿಗೆ ನಡೆದ ಒಂದು ನಿರ್ದಿಷ್ಟ ಬ್ಯಾಚ್‌ನ ವಿದ್ಯಾರ್ಥಿಗಳ ಭೇಟಿ ಅವಿಸ್ಮರಣೀಯವಾಗಿತ್ತು ಎಂದರು.
ಎರಡು ದಶಕಗಳ ಹಳೆಯ ನೆನಪುಗಳನ್ನು ವಿವರಿಸಿ, ಉಪನ್ಯಾಸಕ ವೃಂದದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.