ತಂದೆಯ ನಿರ್ಲಕ್ಷಿಸಿದ್ದಕ್ಕೆ 2.4 ಎಕರೆ ಹೋಯ್ತು

KannadaprabhaNewsNetwork |  
Published : Feb 10, 2026, 02:00 AM IST
High Court

ಸಾರಾಂಶ

ಚೆನ್ನಾಗಿ ನೋಡಿಕೊಳ್ಳದ ಕಾರಣಕ್ಕೆ ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದ 2.4 ಎಕರೆ ಭೂಮಿಯ ಗಿಫ್ಟ್‌ ಡೀಡ್‌ ರದ್ದು ಕೋರಿ ತುಮಕೂರಿನ ವೃದ್ಧರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

  ಬೆಂಗಳೂರು :  ಚೆನ್ನಾಗಿ ನೋಡಿಕೊಳ್ಳದ ಕಾರಣಕ್ಕೆ ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದ 2.4 ಎಕರೆ ಭೂಮಿಯ ಗಿಫ್ಟ್‌ ಡೀಡ್‌ ರದ್ದು ಕೋರಿ ತುಮಕೂರಿನ ವೃದ್ಧರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ.ಸೂರಜ್‌ ಗೋವಿಂದರಾಜು ಅವರಿದ್ದ ಏಕ ಸದಸ್ಯಪೀಠ. 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಹಾಗೂ ಕಲ್ಯಾಣ ಕಾಯಿದೆಯನ್ನು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್‌ ಡೀಡ್‌ ಅನ್ನು ರದ್ದುಗೊಳಿಸಿದೆ.

ಜತೆಗೆ ಹಿರಿಯ ನಾಗರಿಕಗ ಅವರ ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ, ಅವರ ಜೀವನ ನಿರ್ವಹಣೆಗೆ ನೇರವಾಗದೆ ಇದ್ದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಅವರ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಿದೆ ಎಂದು ಹೇಳಿದೆ.

ಪ್ರಕರಣವು ನ್ಯಾಯಮಂಡಳಿ, ಜಿಲ್ಲಾಧಿಕಾರಿಗಳ ವಿಚಾರಣೆ ಹಂತದಲ್ಲಿದ್ದಾಗ ಅಧಿಕಾರಿಗಳು ಅಳವಡಿಸಿಕೊಂಡ ವ್ಯಾಖ್ಯಾನವನ್ನು ಹೈಕೋರ್ಟ್‌ ಒಪ್ಪಿಲ್ಲ. ಗಿಫ್ಟ್‌ ಡೀಡ್‌ ಎಂಬುದು ಸ್ಪಷ್ಟವಾದ ನಿರ್ವಹಣಾ ಷರತ್ತು ಕಾಯಿದೆಯ ಸೆಕ್ಷನ್‌ 23(1) ರಡಿಯಲ್ಲಿ ಕಡ್ಡಾಯ ಅವಶ್ಯಕತೆಯಲ್ಲ. ಒಂದು ವೇಳೆ ಇಂತಹ ಪ್ರಕರಣ ಎದುರಾದರೆ, ಅವುಗಳ ಸಂಗತಿ, ಸಂದರ್ಭ ಮತ್ತು ನಡವಳಿಕೆಯಿಂದ ಊಹಿಸಬಹುದು ಎಂದು ನ್ಯಾಯಪೀಠ ಹೇಳಿದೆ.

ನಂಬಿಕೆ, ನೈತಿಕ ಭರವಸೆ ಮತ್ತು ಕೌಟುಂಬಿಕ ಬಂಧವನ್ನು ಅವಲಂಬಿಸುತ್ತದೆ

ಉಪವಿಭಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ‘ಕಾನೂನುಬದ್ಧವಾಗಿ ದೋಷಪೂರಿತ’ ಮತ್ತು ಕಾಯಿದೆಯ ತಪ್ಪು ತಿಳಿವಳಿಕೆ ಆಧರಿಸಿವೆ ಎಂದು ಹೇಳಿರುವ ನ್ಯಾಯಾಲಯ, ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆ ಮತ್ತು ಕೌಟುಂಬಿಕ ಬಂಧವನ್ನು ಅವಲಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ವೆಂಕಟಯ್ಯನವರ ವೃದ್ಧಾಪ್ಯ, ಗ್ರಾಮೀಣ ಹಿನ್ನೆಲೆ, ನಿಕಟ ಕುಟುಂಬ ಸಂಬಂಧ ಮತ್ತು ಆಸ್ತಿ ವರ್ಗಾವಣೆ ಬಳಿಕ ನಿರ್ಲಕ್ಷ್ಯವನ್ನು ಗಮನಿಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ:

ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ ಸುಮಾರು 2.4 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು. ಅವರು ತಮ್ಮ ಪುತ್ರಿಯರು ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು.

ಬಳಿಕ ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರು. ಅಲ್ಲದೆ, ಹಿರಿಯ ನಾಗರಿಕರ ಕಾಯಿದೆಯಡಿ, ತಮ್ಮ ಗಿಫ್ಟ್‌ ಡೀಡ್‌ ರದ್ದು ಕೋರಿ ಅವರು ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು. ನ್ಯಾಯಮಂಡಳಿಯು 2023ರ ಡಿ.19ರಂದು ಅವರ ದೂರನ್ನು ವಜಾಗೊಳಿಸಿತು, ಉಡುಗೊರೆ ಪತ್ರದಲ್ಲಿ ಹೆಣ್ಣುಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧವನ್ನು ಹೊಂದಿರುವ ಸ್ಪಷ್ಟ ಷರತ್ತು ಇಲ್ಲ ಎಂದು ತೀರ್ಪು ನೀಡಿತ್ತು. 2024ರ ಅ.22ರಂದು ಜಿಲ್ಲಾಧಿಕಾರಿ ಕೂಡ ಅದೇ ಆದೇಶವನ್ನು ಎತ್ತಿಹಿಡಿದಿದ್ದರು.

ಹಾಗಾಗಿ ಗಿಫ್ಟ್‌ ಡೀಡ್‌ ರದ್ದು ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ ವೆಂಕಟಯ್ಯ, ತಾವು ಅನಕ್ಷರಸ್ಥರು ಮತ್ತು ಗಿಫ್ಟ್‌ ಡೀಡ್‌ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದರು. ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂಬ ಭರವಸೆಯ ಮೇರೆಗೆ ಗಿಫ್ಟ್‌ ಡೀಡ್‌ ಮಾಡಿಕೊಟ್ಟಿದ್ದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

80 ಶಾಸಕರ ಬೆಂಬಲ ಇದೆ ಎಂಬುದು ಪ್ರಶ್ನೆಯಲ್ಲ: ಸತೀಶ್‌
ನಮ್ಮ ಪ್ರಚೋದಿಸಬೇಡಿ- ಡಿಕೆ ಸಿಎಂ ಮಾಡಿ ಅಂತ 90 ಶಾಸಕರು ಕೇಳಿದ್ದೇವೆ : ಯತೀಂದ್ರಗೆ ಇಕ್ಬಾಲ್‌