ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ಕನ್ನಡ ಅನುಷ್ಠಾನದಲ್ಲಿ ಲೋಪದೋಷಗಳು ಕಂಡುಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಲಾಗುವ ಸಭೆ-ಸಮಾರಂಭಗಳ ತಿಳುವಳಿಕೆಯನ್ನು ಕನ್ನಡದಲ್ಲಿಯೇ ಅಚ್ಚುಹಾಕಿಸಿ ಸಂಬಂಧಿಸಿದವರಿಗೆ ತಲುಪಿಸಲು ಸೂಚಿಸಲಾಗುವುದು. ಪ್ರತಿ ಕಚೇರಿಯಿಂದ ನಡೆಸಲಾಗುವ ಪತ್ರ ವ್ಯವಹಾರಗಳೂ ಕನ್ನಡದಲ್ಲಿಯೇ ಇರುವಂತೆ ಸೂಚಿಸಲಾಗುವುದು ಎಂದರು.
ಪ್ರತಿ ನಾಮಫಲಕಗಳ ಮೇಲೆ ಆಯಾ ಊರಿನ ಹೆಸರನ್ನು ಬರೆದಿರಬೇಕು. ರಾಜ್ಯದ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಭಾಷಾನೀತಿಯ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ನೂತನವಾಗಿ ನೇಮಕಗೊಂಡಿರುವ ಜಾಗೃತಿ ಸಮಿತಿ ಸದಸ್ಯರ ಸಲಹೆ-ಸಹಕಾರವನ್ನು ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಡಾ.ಎ.ಬಿ.ರಾಮಚಂದ್ರ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ನಿರ್ವಹಿಸುವ ಪ್ರತಿ ಕಡತಗಳು, ಅಧಿಕಾರಿಗಳು ಬರೆಯುವ ಟಿಪ್ಪಣಿಗಳೂ ಸಹ ಆಂಗ್ಲಭಾಷೆಯಲ್ಲಿರುವುದನ್ನು ಗಮನಿಸಲಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಕನ್ನಡ ಅನುಷ್ಠಾನಕ್ಕೆ ತೊಡಕಾಗಿದೆ ಎಂದರು.
ಸಾಂಸ್ಕೃತಿಕವಾಗಿ, ಭಾಷಿಕವಾಗಿ ಕನ್ನಡ ಭಾಷೆಯ ಅಸ್ಮಿತತೆಯ ಕೇಂದ್ರ ಬಿಂದು ಶಿವಮೊಗ್ಗ ಜಿಲ್ಲೆ. ಇಲ್ಲಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸುವ ಕಾರ್ಯ ಆರಂಭಗೊಳ್ಳಬೇಕು. ಆದ್ದರಿಂದ ಪ್ರತಿ ತಿಂಗಳಲ್ಲಿ ಒಂದು ದಿನ ಮೂರು ಕಚೇರಿಗಳಿಗೆ, ಶಾಲೆ-ಕಾಲೇಜು ವಿಶ್ವವಿದ್ಯಾಲಯಗಳಿಗೆ ಜಾಗೃತಿ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.ನಗರದಲ್ಲಿನ ಅಂಗಡಿ-ಮುಂಗಟ್ಟುಗಳ ನಾಮಫಲಕಗಳೂ ಸಹ ಶೇ.60ಕನ್ನಡದಲ್ಲಿರಬೇಕೆಂಬ ನಿಯಮವಿದೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನೂತನ ಅಂಗಡಿಗಳಿಗೆ ಹಾಗೂ ಅದರ ನವೀಕರಣ ಸಂದರ್ಭದಲ್ಲಿ ಅಂಗಡಿಯ ನಾಮಫಲಕದ ಛಾಯಾಚಿತ್ರವನ್ನು ಅವಲೋಕಿಸಿ ಪರವಾನಿಗೆ ನೀಡಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕನ್ನಡ ಜಾಗೃತ ಸಮಿತಿ ಸದಸ್ಯ ಡಿ.ಮಂಜುನಾಥ್ ಮಾತನಾಡಿ, ರಾಷ್ಟ್ರೀಯ ಬ್ಯಾಂಕುಗಳ ಚಲನ್‌ಗಳಲ್ಲಿ, ರೈಲ್ವೇ ಟಿಕೇಟ್‌ಗಳಲ್ಲಿ ಕನ್ನಡ ಕಾಣೆಯಾಗಿರುವುದು ಆಘಾತಕಾರಿಯಾಗಿದೆ. ಇಲ್ಲಿ ಕನ್ನಡ ಬಳಕೆಗೆ ಸೂಚನೆ ನೀಡಬೇಕು ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ಹಾಲಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ಎಚ್.ಜಿ.ಮಲ್ಲಯ್ಯ, ಸತೀಶ್ ಅಧೀನಸಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಸುರೇಶ್ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.