ಕನ್ನಡಪ್ರಭ ವಾರ್ತೆ ಪಾಂಡವಪುರ
ಸೋಮವಾರ ಪಟ್ಟಣದಲ್ಲಿರುವ ಅಂಕೇಗೌಡರ ಪುಸ್ತಕ ಮನೆಗೆ ಭೇಟಿ ನೀಡಿದ ಅಲ್ಲಿನ ಪುಸ್ತಕ ಸಂಗ್ರಹ ಕಂಡು ಬೆರಗಾದ ಮಾಜಿ ಡಿಸಿಎಂ ಆಶ್ವತ್ಥ ನಾರಾಯಣಗೌಡ, ಕೆಲಕಾಲ ಪುಸ್ತಕ ಮನೆಯಲ್ಲಿ ಸುತ್ತಾಡಿ ಅಂಕೇಗೌಡರು ಸಂಗ್ರಹಿಸಿರುವ ಪುಸ್ತಕಗಳ ವೀಕ್ಷಣೆ ಮಾಡಿದರು. ಅಂಕೇಗೌಡರು ಸಂಗ್ರಹಿಸಿರುವ ಅಪರೂಪದ ನಾಣ್ಯಗಳನ್ನು ವೀಕ್ಷಿಸಿ ಆಶ್ವರ್ಯ ವ್ಯಕ್ತಪಡಿಸಿದರು. ಬಳಿಕ ಕಾರ್ಯಕರ್ತರೊಂದಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಅವರನ್ನು ಅಭಿನಂದಿಸಿದರು.
ನಂತರ ಮಾತನಾಡಿದ ಅವರು, 50 ವರ್ಷಗಳ ಸತತ ಪ್ರಯತ್ನದಿಂದ ಅಂಕೇಗೌಡರು ಜ್ಞಾನದ ಶಕ್ತಿ ಏನು ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಜಗತ್ತಿಗೆ ತೋರಿಸಿದ್ದಾರೆ. ಎಲ್ಲರೂ ಹಣ, ಅಂತಸ್ತು, ಜಮೀನು, ಒಡವೆ ಸಂಪಾದನೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ಅಂಕೇಗೌಡರು ಪುಸ್ತಕ ಸಂಗ್ರಹ ಮಾಡುವ ಮೂಲಕ ಜ್ಞಾನಕ್ಕೆ ಒತ್ತು ಕೊಟ್ಟಿದ್ದಾರೆ. ಸ್ಪಷ್ಟ ಗುರಿ ಮತ್ತು ಸಂದೇಶ ಇಟ್ಟುಕೊಂಡು ಸಮಾಜ ಮುಖಿಗಳಾಗಿ ಸತ್ಕಾರ್ಯದ ಕೆಲಸ ಮಾಡಿದ್ದಾರೆ. ಅವರ ಈ ಸಾಧನೆಯಿಂದ ಪಾಂಡವಪುರ ಹೆಸರುವಾಸಿಯಗಿದೆ. ಅಂಕೇಗೌಡರಿಗೆ ನಳಂದ ಮತ್ತು ತಕ್ಷಶಿಲೆ ರೀತಿಯಲ್ಲಿ ಈ ಗ್ರಂಥಾಲಯ ಬೆಳೆಯಬೇಕು ಎಂಬುದು ಅವರ ಇಚ್ಛೆಯಾಗಿದೆ ಎಂದರು.ಅಂಕೇಗೌಡರ ಪುಸ್ತಕ ಸಂಗ್ರಹ ಗಮನಿಸಿದ್ದ ಹಿಂದಿನ ಮುಖ್ಯಮಂತ್ರಿ ಸದಾನಂದಗೌಡರು 2012ರಲ್ಲಿ ಬಜೆಟ್‌ನಲ್ಲಿ 50 ಲಕ್ಷ ಘೋಷಿಸಿದ್ದರು. ಅದೇ ರೀತಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಸಹಾಯಾಸ್ತ ಚಾಚಿದ್ದಾರೆ. ಮುಂದಿನ ದಿನಗಳಲ್ಲಿ ಅಂಕೇಗೌಡರ ಆಶಯಕ್ಕೆ ಅನುಗುಣವಾಗಿ ಎಲ್ಲ ರೀತಿಯ ಸಹಕಾರ ಸಿಗಲಿದೆ ಎಂದು ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮೇಶ್, ಕ್ಷೇತ್ರಾಧ್ಯಕ್ಷ ನೀಲನಹಳ್ಳಿ ಧನಂಜಯ, ಟೌನ್ ಅಧ್ಯಕ್ಷ ಸೋಮಶೇಖರ್, ಶ್ರೀರಂಗಪಟ್ಟಣ ಟಿ.ಶ್ರೀಧರ್, ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಎಸ್‌ಎನ್‌ಟಿ ಸೋಮಶೇಖರ್, ನವೀನ್‌ಕುಮಾರ್, ಇತರರು ಇದ್ದರು.