ಟೂರಿಸಂನಿಂದ 4 ವರ್ಷಕ್ಕೆ 2,750 ಕೋಟಿ ರು.ಆದಾಯ : ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌

KannadaprabhaNewsNetwork |  
Published : Feb 28, 2025, 12:46 AM ISTUpdated : Feb 28, 2025, 10:32 AM IST
Travel expo  1 | Kannada Prabha

ಸಾರಾಂಶ

ಪ್ರವಾಸೋದ್ಯಮದಿಂದ ರಾಜ್ಯಕ್ಕೆ ಮೂರ್ನಾಲ್ಕು ವರ್ಷದಲ್ಲಿ ಅಂದಾಜು ₹2,750 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

 ಬೆಂಗಳೂರು : ಪ್ರವಾಸೋದ್ಯಮದಿಂದ ರಾಜ್ಯಕ್ಕೆ ಮೂರ್ನಾಲ್ಕು ವರ್ಷದಲ್ಲಿ ಅಂದಾಜು ₹2,750 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ನಗರದ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ‘ಕರ್ನಾಟಕ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಎಕ್ಸ್‌ಪೋ’ಗೆ ಭೇಟಿ ನೀಡಿ ಬ್ಯುಸಿನೆಸ್‌ ಟು ಬ್ಯುಸಿನೆಸ್‌(ಬಿ2ಬಿ) ಸಭೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಮೂರ್ನಾಲ್ಕು ವರ್ಷದಲ್ಲಿ ₹2,750 ಕೋಟಿ ಆದಾಯ ಬರುವ ನಿರೀಕ್ಷೆಯಿದೆ. ಜೊತೆಗೆ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಾಗಲಿವೆ. ಯುವಜನರಿಗೆ ತಮ್ಮ ಸ್ಥಳಗಳಲ್ಲೇ ಉದ್ಯೋಗ ದೊರೆಯಲಿದ್ದು, ದೊಡ್ಡ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ವಿವಿಧ ವಲಯಗಳ ಜೊತೆಗೆ ಪ್ರವಾಸೋದ್ಯಮವೂ ಬೆಳವಣಿಗೆ ಹೊಂದಲಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ವಿಶ್ವಕ್ಕೆ ರಾಜ್ಯದ ಅದ್ಭುತ ಪ್ರವಾಸಿ ತಾಣಗಳನ್ನು ಪರಿಚಯಿಸಲು ಫೆ.27 ಮತ್ತು 28 ರಂದು ಬಿ2ಬಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. 36 ದೇಶದ 300 ಜನರ ಸಂದರ್ಶಿಸಿ 110 ವಿದೇಶಿ ಖರೀದಿದಾರರು, ಏಜೆಂಟ್‌ಗಳು ಮತ್ತು 15 ವಿದೇಶಿ ಟ್ರಾವೆಲ್ ಮಾಧ್ಯಮದವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

16 ಸಾವಿರ ಬಿ2ಬಿ ಸಭೆ:

ಪ್ರವಾಸೋದ್ಯಮ ವಲಯದ ಎಲ್ಲಾ ಭಾಗಿದಾರರನ್ನು ಒಂದೇ ಸೂರಿನಡಿ ಕರೆತಂದು ಚರ್ಚೆ ನಡೆಸುವ ಗುರಿಯನ್ನು ಹೊಂದಿದ್ದೇವೆ. ಹೋಟೆಲ್, ಟ್ರಾವಲ್ ಏಜೆನ್ಸಿ, ಹೋಂ ಸ್ಟೇ, ಕೃಷಿ ಪ್ರವಾಸೋದ್ಯಮ, ಪ್ರವಾಸಿ ಮಾರ್ಗದರ್ಶಿಗಳು, ಮಹಿಳಾ ಉದ್ಯಮಿಗಳು ಸೇರಿ ಸಂಬಂಧಪಟ್ಟವರೆಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಒಟ್ಟು ಸುಮಾರು 16000 ಬಿ2ಬಿ ಸಭೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ವಿವಿಧ ಭಾಗಗಳ ಭಾಗಿದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಎಕ್ಸ್‌ಪೋದಲ್ಲಿ 150ಕ್ಕೂ ಅಧಿಕ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಕಾವೇರಿ ಹ್ಯಾಂಡಿಕ್ರಾಫ್ಟ್‌, ಕೆಎಸ್‍ಐಸಿ, ಕಾಫಿ ಮಂಡಳಿ, ಕೆಎಸ್‍ಡಿಎಲ್, ಕೆಎಂಎಫ್, ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮಳಿಗೆಗಳನ್ನೂ ತೆರೆಯಲಾಗಿದೆ.

ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ್‌, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್‌, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್, ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು.

ಕರೇಜ್‌ ಪುನರುಜ್ಜೀವನ:

ಬೀದರ್‌ನಲ್ಲಿ ಬಹುಮನಿ ಸುಲ್ತಾನರ ಕಾಲದಲ್ಲಿ ಭೂಮಿಯ ಕೆಳಭಾಗದಲ್ಲಿ 2 ಕಿ.ಮೀ. ದೂರ ನೀರು ಪೂರೈಸುವ ಸುರಂಗ ಜಲಮಾರ್ಗ(ಕರೇಜ್‌) ಇದ್ದು ಇದನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. 650 ಮೀ. ಕಾಮಗಾರಿಗೆ ಈಗಾಗಲೇ ವಿಸ್ತೃತ ಯೋಜನಾ ವರದಿ ತಯಾರಿಸಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.ಉತ್ತರ ಕರ್ನಾಟಕ ಭಾಗದ ಕೆಲವು ಐತಿಹಾಸಿಕ ದೇವಸ್ಥಾನಗಳನ್ನು ‘ತ್ರೀಡಿ ಹೋಲೋಗ್ರಾಮ್‌ ತಂತ್ರಜ್ಞಾನ’ದಡಿ ಚಿತ್ರೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರಿಂದ ಪ್ರವಾಸಿಗರು ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಆಲಮಟ್ಟಿ, ಕೃಷ್ಣರಾಜ ಸಾಗರ ಮತ್ತಿತರ ಕಡೆ ಜಲ ವಿಮಾನ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ.

-ಎಚ್‌.ಕೆ.ಪಾಟೀಲ್‌, ಪ್ರವಾಸೋದ್ಯಮ ಸಚಿವ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ