2 ಮೇಲ್ಸೇತುವೆಗಳಲ್ಲಿ ಬೈಕ್‌, ಆಟೋ ಸಂಚಾರಕ್ಕೆ ಅವಕಾಶ

KannadaprabhaNewsNetwork |  
Published : Sep 09, 2026, 02:00 AM IST
ಫ್ಲೈಓವರ್‌  | Kannada Prabha

ಸಾರಾಂಶ

ಸಂಚಾರ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮೇಲ್ಸೇತುವೆಗಳ ಮೇಲೆ ಕೆಲ ವಾಹನಗಳಿಗೆ ವಿಧಿಸಿದ್ದ ಸಂಚಾರ ನಿರ್ಬಂಧವನ್ನು ಮಾರ್ಪಾಡುಗೊಳಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಪೊಲೀಸರು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಚಾರ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮೇಲ್ಸೇತುವೆಗಳ ಮೇಲೆ ಕೆಲ ವಾಹನಗಳಿಗೆ ವಿಧಿಸಿದ್ದ ಸಂಚಾರ ನಿರ್ಬಂಧವನ್ನು ಮಾರ್ಪಾಡುಗೊಳಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಪೊಲೀಸರು ಮುಂದಾಗಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದ ಮೇಲ್ಸೇತುವೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಬೈಕ್‌ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ. ಈ ಹಿಂದೆ ಈ ಎರಡೂ ಮೇಲ್ಸೇತುವೆಯಲ್ಲಿ ಬೈಕ್‌ ಸೇರಿ ವಿವಿಧ ಮಾದರಿಯ ವಾಹನಗಳ ಸಂಚಾರವನ್ನು ನಿಗದಿತ ಅವಧಿಯಲ್ಲಿ ನಿರ್ಬಂಧಿಸಲಾಗಿತ್ತು. ಇದೀಗ ಆ ಆದೇಶವನ್ನು ಮಾರ್ಪಾಡು ಮಾಡಲಾಗಿದೆ.

ಸುಗಮ ಸಂಚಾರದ ಉದ್ದೇಶದಿಂದ ನಗರದ 5 ಮೇಲ್ಸೇತುವೆಯಲ್ಲಿ ವಿವಿಧ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. 5 ಕಾರಿಡಾರ್‌ಗಳ ಪೈಕಿ, 4 ಕಾರಿಡಾರ್‌ಗಳಲ್ಲಿ ನಿರ್ಬಂಧವನ್ನು ಅನುಷ್ಠಾನಕ್ಕೆ ತರಲಾಗಿತ್ತು. ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ, ಡಬಲ್‌ ಡೆಕ್ಕರ್ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರವು ಸುಗಮವಾಗಿತ್ತು. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮೇಲ್ಸೇತುವೆ (ಸಂಜೀವ್‌ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ) ಸರಕು ಸಾಗಣೆ ವಾಹನಗಳು, ಬೈಕ್‌, ಹಾಗೂ ಆಟೋ ಸೇರಿದಂತೆ ಹಲವು ವರ್ಗದ ವಾಹನಗಳನ್ನು ಪ್ರವೇಶ ಮಾರ್ಗಗಳಲ್ಲೇ ಕೆಳಗಿನ ರಸ್ತೆಗೆ ತಿರುಗಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವುದು ಕಂಡುಬಂದಿತ್ತು. ಇದರಿಂದ ಮೇಲ್ಸೇತುವೆಗೆ ಹೊಂದಿಕೊಂಡಿರುವ ಕೆಳಮಟ್ಟದ ರಸ್ತೆಯ ಸಂಚಾರದ ಮೇಲೂ ಹೆಚ್ಚುವರಿ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ, ವಿಮಾನ ನಿಲ್ದಾಣ ರಸ್ತೆಯ ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

ನಿಗದಿ ಪಡಿಸಿರುವ ಸಮಯದಲ್ಲಿ ಸರಕು ಸಾಗಣೆ ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಬೈಕ್‌ ಹಾಗೂ ಆಟೋ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೈಕ್‌ ಸವಾರರು ಮುಖ್ಯವಾಗಿ ಎಡಭಾಗದ ಲೇನ್‌ ಬಳಸಬೇಕು, ಪಥದ ಶಿಸ್ತು ಪಾಲಿಸಬೇಕು, ಅಪಾಯಕಾರಿ ಓವರ್‌ಟೇಕ್‌ ತಪ್ಪಿಸಬೇಕು, ಪ್ರತಿ ಗಂಟೆ 60 ಕಿ.ಮೀ ಮೀರದಂತೆ ಸುರಕ್ಷಿತ ವೇಗದಲ್ಲಿ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲೂ ಸೆ.11ರಿಂದ ಸರಕು ವಾಹನಗಳ ಸಂಚಾರ ಬಂದ್ ಆಗಲಿದೆ. ಆ ಮೇಲ್ಸೇತುವೆಯಲ್ಲಿ ಬೈಕ್‌ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ