ಹುಬ್ಬಳ್ಳಿ: ನಗರದ ಕುಸಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜಿನ ಪಕ್ಕದ ಮೈದಾನದಲ್ಲಿ ಸಂಸದರ ಸಾಂಸ್ಕೃತಿಕ ಮಹೋತ್ಸವ 2026ರ ಪ್ರಯುಕ್ತ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಫೆ. 7 ಮತ್ತು 8ರಂದು ನಡೆಯಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಏಳನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದೆ. ವಿವಿಧ ದೇಶಗಳಿಂದ ಅಂತಾರಾಷ್ಟ್ರೀಯ ಗಾಳಿಪಟ ಪಟುಗಳು, ದೇಶಿ ಸಂಸ್ಕೃತಿ ಸಾರುವ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಲಿದ್ದಾರೆ ಎಂದು ತಿಳಿಸಿದರು.
ಎರಡು ದಿನಗಳ ಉತ್ಸವದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ದೇಶಿ ಕ್ರೀಡೆ, ಆಹಾರ ಮೇಳ, ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಫೆ. 7ರಂದು ಗಾಯಕ ಜಸ್ಕರನ್ ಸಿಂಗ್, ಗಾಯಕಿ ದಿವ್ಯಾ ರಾಮಚಂದ್ರ ತಂಡದವರಿಂದ ಸಂಗೀತ ಸಂಜೆ ಏರ್ಪಡಿಸಲಾಗಿದೆ. ಫೆ. 8ರಂದು ಸಂಜೆ ಮೆಲೋಡಿ ಕಿಂಗ್ ಸೋನು ನಿಗಮ್ ಹಾಗೂ ಹುಬ್ಬಳ್ಳಿಯ ಮಹನ್ಯಾ ಪಾಟೀಲ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.ದೇಶಿ ಕ್ರೀಡೆ, ಯೋಗ, ಮಲ್ಲಕಂಬ, ಗೋಲಿ ಆಟ, ಲಗೋರಿ, ಹಗ್ಗ ಜಗ್ಗಾಟ, ಚಿನ್ನಿದಾಂಡು ಸ್ಪರ್ಧೆಯಲ್ಲಿ ಪ್ರಥಮ ಬಂದವರಿಗೆ ₹10 ಸಾವಿರ, ದ್ವಿತೀಯ ₹7500 ಹಾಗೂ ತೃತೀಯ, ಚತುರ್ಥ ₹5 ಸಾವಿರ ಬಹುಮಾನ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.