ಶಾಲಾ ಬಸ್‌ ಚಕ್ರದಡಿ 2 ಕಂದಮ್ಮಗಳು ಬಲಿ

KannadaprabhaNewsNetwork |  
Published : Feb 12, 2026, 02:15 AM ISTUpdated : Feb 12, 2026, 08:32 AM IST
Accident

ಸಾರಾಂಶ

ಖಾಸಗಿ ಶಾಲಾ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಮೇಲಿಂದ ಕೆಳಗೆ ಬಿದ್ದ ಪುಟ್ಟ ಮಕ್ಕಳಿಬ್ಬರ ಮೇಲೆ ಅದೇ ಬಸ್ಸಿನ ಚಕ್ರ ಹರಿದು ಸ್ಥಳದಲ್ಲಿ ಇಬ್ಬರೂ ಕಂದಮ್ಮಗಳು ಮೃತಪಟ್ಟ ದುರ್ಘಟನೆ ನಗರದಲ್ಲಿ ನಡೆದಿದೆ.

 ಬೆಂಗಳೂರು :  ಖಾಸಗಿ ಶಾಲಾ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಮೇಲಿಂದ ಕೆಳಗೆ ಬಿದ್ದ ಪುಟ್ಟ ಮಕ್ಕಳಿಬ್ಬರ ಮೇಲೆ ಅದೇ ಬಸ್ಸಿನ ಚಕ್ರ ಹರಿದು ಸ್ಥಳದಲ್ಲಿ ಇಬ್ಬರೂ ಕಂದಮ್ಮಗಳು ಮೃತಪಟ್ಟ ದುರ್ಘಟನೆ ನಗರದಲ್ಲಿ ನಡೆದಿದೆ.

ಹೆಣ್ಣೂರು ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಗಡೆನಗರ ಪೊಲೀಸ್ ಕ್ವಾರ್ಟರ್ಸ್​​ ಬಳಿ ಬುಧವಾರ ಘಟನೆ ನಡೆದಿದ್ದು, ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಎಆರ್‌ ಕಾನ್ಸ್‌ಟೇಬಲ್ ನಾಗನಗೌಡ ಮಾಲಿ ಪಾಟೀಲ್‌ ಅವರ ಮಗಳು ವರ್ಷಾ (2) ಹಾಗೂ ನಾಗನಗೌಡ ಅವರ ಅಣ್ಣನ ಮಗಳಾದ ಭಾನು (4) ಮೃತ ಮಕ್ಕಳು. ಈ ಸಂಬಂಧ ಖಾಸಗಿ ಶಾಲೆಯ ಬಸ್ ಚಾಲಕ ಯಾದಗಿರಿ ಮೂಲದ ಮಾರೆಪ್ಪ (42) ಎಂಬಾತನನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ನಗರದ ಸಿಎಆರ್ ವಿಭಾಗದಲ್ಲಿ ಅಸಿಸ್ಟೆಂಟ್‌ ಹೆಡ್‌ ಕಾನ್‌ಸ್ಪೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗನಗೌಡ ಅವರು ಬುಧವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು. ಥಣಿಸಂದ್ರದ ಪಿ.ಟಿ.ಎಸ್ ಕಡೆಯಿಂದ ಹೆಗಡೆನಗರದ ಕಡೆಗೆ ಹೋಗಲು ಸೆಂಟ್ರಲ್ ರೆವನ್ಯೂ ಲೇಔಟ್‌ ಮುಖ್ಯರಸ್ತೆಯಲ್ಲಿ ಹೋಗುವಾಗ ಎದುರುಗಡೆಯಿಂದ ಬಂದ ಖಾಸಗಿ ಶಾಲೆಗೆ ಸೇರಿದ ಬಸ್ ಅಚಾನಕ್ಕಾಗಿ ತಿರುವು ತೆಗೆದುಕೊಂಡಿದ್ದು, ಈ ವೇಳೆ ಎದುರಿಗೆ ಬಂದ ಬಸ್‌ ಹೋಗಲಿ ಎಂದು ನಾಗನಗೌಡ ಸ್ಕೂಟರ್‌ ನಿಲ್ಲಿಸಿದ್ದಾರೆ. ಆದರೆ, ಅದೇ ಸ್ಕೂಟರ್‌ಗೆ ಬಸ್‌ ಡಿಕ್ಕಿ ಹೊಡೆದಿದೆ.

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಗನಗೌಡ ಮತ್ತು ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ. ಮಕ್ಕಳಿಬ್ಬರು ನೇರವಾಗಿ ಬಸ್ಸಿನ ಚಕ್ರದಡಿ ಬಿದ್ದಿದ್ದು, ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಬಸ್ ಮಕ್ಕಳ ಮೇಲೆ ಹರಿದಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಣ್ಣೆದುರೇ ಮಕ್ಕಳನ್ನು ಕಳೆದುಕೊಂಡ ನಾಗನಗೌಡ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಗಿಲುಮುಟ್ಟಿ ಆಕ್ರಂದನ:

ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿದೆ. ಸುದ್ದಿ ತಿಳಿದು ಆಸ್ಪತ್ರೆ ಬಳಿ ಜಮಾಯಿಸಿದ್ದ ಪಾಲಕರು ಮತ್ತು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಜಯಪ್ರಕಾಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅತಿವೇಗದಿಂದ ಅಪಘಾತ

ಘಟನೆಯ ಸಂಬಂಧ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಚಾಲನೆಯ ಸಮಯದಲ್ಲಿ ಮದ್ಯ ಸೇವಿಸಿದ್ದಾನೆಯೇ ಎಂದು ಪರೀಕ್ಷೆ ನಡೆಸಲಾಗಿದ್ದು, ಆತ ಮದ್ಯ ಸೇವಿಸಿರುವುದು ಕಂಡು ಬಂದಿಲ್ಲ. ಆದರೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿರುವುದು ತಿಳಿದು ಬಂದಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

- ಜಯಪ್ರಕಾಶ್‌ ಉತ್ತರ ವಿಭಾಗದ ಡಿಸಿಪಿ (ಸಂಚಾರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?