ಹೊಸ ವರ್ಷ ದಿನವೇ ರಸ್ತೆ ಅಪಘಾತಕ್ಕೆ 2 ಬಲಿ!

KannadaprabhaNewsNetwork |  
Published : Jan 02, 2025, 12:30 AM IST
1ಕೆಡಿವಿಜಿ5-ದಾವಣಗೆರೆ ನೂತನ ಕಾಲೇಜು ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಹೋಗಿದ್ದ ವೇಳೆ ಕಾರು, ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ನಿಟುವಳ್ಳಿ ಹೊಸ ಬಡಾವಣೆಯ ಕಾರ್ತಿಕ್. ..............1ಕೆಡಿವಿಜಿ6, 7, 8-ದಾವಣಗೆರೆ ನೂತನ ಕಾಲೇಜು ರಸ್ತೆಯಲ್ಲಿ ಕಳೆದ ರಾತ್ರಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನುಜ್ಜುಗುಜ್ಜಾದ ಸ್ಕೂಟರ್ ಹಾಗೂ ಕಾರಿನ ಎಡ ಬದಿಯ ಮುಂಭಾಗ. | Kannada Prabha

ಸಾರಾಂಶ

ಹೊಸ ವರ್ಷಾಚರಣೆ ದಿನವೇ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಓರ್ವ ಯುವಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮತ್ತೊಬ್ಬ ಯುವಕನಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- ರಾತ್ರಿ ಕಾರು-ಸ್ಕೂಟರ್ ಡಿಕ್ಕಿಯಲ್ಲಿ ವಿದ್ಯಾರ್ಥಿ ಸಾವು, ಮತ್ತೊಬ್ಬನಿಗೆ ಗಾಯ- ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಆಟೋ ಡಿಕ್ಕಿ, ಆಯತಪ್ಪಿ ಬಿದ್ದ ಮಹಿಳೆಯ ಸಾವು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹೊಸ ವರ್ಷಾಚರಣೆ ದಿನವೇ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಓರ್ವ ಯುವಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮತ್ತೊಬ್ಬ ಯುವಕನಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಗರದ ನಿಟುವಳ್ಳಿ ಹೊಸ ಬಡಾವಣೆಯ 60 ಅಡಿ ರಸ್ತೆಯ ನಿವಾಸಿ ಕಾರ್ತಿಕ್ (19) ಮೃತ ಯುವಕ. ಹಿಂಬದಿ ಸವಾರ ಈಶ್ವರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನ ಟೈಯರ್ ಸಿಡಿದು, ಮುಂಭಾಗ ನುಜ್ಜುಗುಜ್ಜಾಗಿದ್ದರೆ, ಕಾರ್ತಿಕ್‌ನ ಹೊಸ ಸ್ಕೂಟರ್ ಹೇಳಹೆಸರಿಲ್ಲದಂತೆ ನುಜ್ಜುಗುಜ್ಜಾಗಿದೆ.

ವಿದ್ಯಾನಗರದ ಕಾಫಿ ಡೇ ಎದುರಿನ ನೂತನ ಕಾಲೇಜು ರಸ್ತೆಯಲ್ಲಿ ಕಾರು ಬಿಐಇಟಿ ಕಡೆಯಿಂದ ಬರುತ್ತಿದ್ದತ್ತು. ಕಾರ್ತಿಕ್ ಹೊಸ ಸ್ಕೂಟರ್‌ನಲ್ಲಿ ಸ್ನೇಹಿತ ಈಶ್ವರ ಜೊತೆಗೆ ಸಾಗುತ್ತಿದ್ದ. ಈ ವೇಳೆ ಎದುರಿನಿಂದ ರಸ್ತೆ ಎಡಬದಿಗೆ ಬರಬೇಕಾದ ಕಾರು ಬಲಬದಿಗೆ ಬಂದಿದೆ. ಇದರಿಂದ ಕಾರು ಚಾಲನೆ ಮಾಡುತ್ತಿದ್ದ ಭುವನ್ ಹಾಗೂ ಸ್ಕೂಟರ್ ಚಾಲನೆ ಮಾಡುತ್ತಿದ್ದ ಕಾರ್ತಿಕ್‌ ಭಯಭೀತರಾಗಿ, ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಕಾರು ಚಾಲಕ ಭುವನ್‌ನನ್ನು ಸಂಚಾರಿ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆಯ ಕೊನೆಯ ಕ್ಷಣದ ಮುನ್ನ 1 ಸೆಕೆಂಡ್ ದೃಶ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹೊಸ ವರ್ಷಾಚರಣೆಯನ್ನು ಸ್ನೇಹಿತರೊಂದಿಗೆ ಆಚರಿಸುವುದಾಗಿ ತಾಯಿಗೆ ಹೇಳಿ ಹೋಗಿದ್ದ ಒಬ್ಬನೇ ಮಗನಾದ ಕಾರ್ತಿಕ್ ಸಂಭ್ರಮದಲ್ಲಿ ಹೋದವನು, ಕೆಲವೇ ಗಂಟೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತನ ತಾಯಿ, ಬಂಧು-ಬಳಗದ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋದಲ್ಲಿದ್ದ ಮಹಿಳೆ ದುರಂತ ಸಾವು:

ಮತ್ತೊಂದು ಪ್ರಕರಣದಲ್ಲಿ ಜಿಪಂ ಸಮೀಪ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿ ಕುಳಿತಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - - -1ಕೆಡಿವಿಜಿ5: ಕಾರ್ತಿಕ್

PREV