ಯಲ್ಲಾಪುರ: ಬೇಡ್ತಿ- ಅಘನಾಶಿನಿ- ವರದಾ ನದಿ ಜೋಡಣೆಯ ಸರ್ಕಾರದ ತೀರ್ಮಾನದ ವಿರುದ್ಧ ನ. ೩ರಂದು ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಲಾಗುವುದು. ಪಕ್ಷಾತೀತವಾದ ಹೋರಾಟ ಇದಾಗಿದ್ದು, ೨೦ ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೇಳಿದರು.
ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಶ್ರೀಗಳ ನಿರ್ದೇಶನದಂತೆ ಜಿಲ್ಲೆಯ ಹಿತಕ್ಕಾಗಿ ಹೋರಾಟ ನಡೆಯುತ್ತಿದೆ. ಇಲ್ಲಿ ಜಾತಿ, ಧರ್ಮ, ಪಕ್ಷಭೇದ ಇಲ್ಲ. ನಮ್ಮ ಸತ್ವಪರೀಕ್ಷೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಸರ್ಕಾರಕ್ಕೆ ಗಟ್ಟಿಯಾದ ಧ್ವನಿ ತಲುಪಿಸುವ ಮೂಲಕ ಎಲ್ಲರೂ ಕೈಜೋಡಿಸೋಣ ಎಂದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ನದಿ ತಿರುವು ಯೋಜನೆಯ ವಿರುದ್ಧದ ಹೋರಾಟ ನಮ್ಮ ಜಿಲ್ಲೆಯ ಅಸ್ಮಿತೆಯ ಹೋರಾಟ. ಜನರ ಶಕ್ತಿ ಹಾಗೂ ಗುರುಗಳ ಆಶೀರ್ವಾದದ ಶಕ್ತಿಯ ಮೂಲಕ ಯೋಜನೆ ತಡೆಯುವವರೆಗೆ ಹೋರಾಟ ನಡೆಯಬೇಕು ಎಂದರು.ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುಜಯ್ ಮರಾಠಿ, ಸಮಿತಿಯ ಪ್ರಮುಖರಾದ ರಾಘವೇಂದ್ರ ಭಟ್ಟ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ನರಸಿಂಹ ಸಾತೊಡ್ಡಿ, ವೆಂಕಟರಮಣ ಕಿರಕುಂಭತ್ತಿ, ನಾಗರಾಜ ಕವಡಿಕೆರೆ, ವಿ.ಟಿ. ಹೆಗಡೆ, ಆರ್.ಎಸ್. ಭಟ್ಟ, ಪ್ರಸಾದ ಹೆಗಡೆ, ಮಹೇಶ ದೇಸಾಯಿ, ಅಪ್ಪು ಆಚಾರಿ, ಭಾಸ್ಕರ ಸಿದ್ದಿ ಇತರರಿದ್ದರು.