ಪಿಟಿಐ ನವದೆಹಲಿ:ಕೇಂದ್ರ ಪರಿಸರ ಸಚಿವಾಲಯವು ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶವೂ ಸೇರಿದಂತೆ ಪಶ್ಚಿಮ ಘಟ್ಟಗಳ 56,825.7 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು (ಇಎಸ್‌ಎ) ಘೋಷಿಸಿ 7ನೇ ಬಾರಿ ಕರಡು ಅಧಿಸೂಚನೆ ಜಾರಿ ಮಾಡಿದೆ.ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿರುವ 56,825.7 ಚ.ಕಿ.ಮೀ. ವಿಸ್ತೀರ್ಣದ ಈ ಪ್ರದೇಶವನ್ನು ವಿಶಿಷ್ಟ ಜೀವ ವೈವಿಧ್ಯವನ್ನು ಹೊಂದಿರುವ, ಸಂರಕ್ಷಣೆಗೆ ವಿಶೇಷ ಗಮನ ನೀಡಬೇಕಾದ ಪ್ರದೇಶವೆಂದು ಪರಿಸರ ಸಚಿವಾಲಯ ಗುರುತಿಸಿದೆ.
ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಿಸುವ ಪ್ರಸ್ತಾಪವನ್ನು ಮೊದಲ ಬಾರಿಗೆ 2011ರಲ್ಲಿ ಮಾಧವ್ ಗಾಡ್ಗಿಲ್ ಸಮಿತಿ ಶಿಫಾರಸು ಮಾಡಿತ್ತು. 2013ರಲ್ಲಿ ಕೆ. ಕಸ್ತೂರಿರಂಗನ್ ಸಮಿತಿಯೂ ಇದನ್ನು ಪರಿಶೀಲಿಸಿ ವರದಿ ನೀಡಿತ್ತು. 2014ರ ಮಾರ್ಚ್‌ನಲ್ಲಿ ಮೊದಲ ಕರಡು ಜಾರಿಯಾದ ನಂತರ ಇದುವರೆಗೆ ಒಟ್ಟು 7 ಬಾರಿ ಕರಡು ಅಧಿಸೂಚನೆ ಜಾರಿಯಾಗಿದೆ.