ಕೆ.ಎಂ.ಮಂಜುನಾಥ
ಇಲ್ಲಿನ ಜೀನ್ಸ್ ವಾಷಿಂಗ್ ಯೂನಿಟ್‌ಗಳಿಗೆ ನೀರಿನ ಅಭಾವ ತಲೆದೋರಿದೆ. ಕೆಲವು ಘಟಕಗಳು ಬಂದ್ ಆಗಿವೆ. ಕೆಲವು ಟ್ಯಾಂಕರ್ ನೀರನ್ನು ಆಶ್ರಯಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಭಾಗಶಃ ಜೀನ್ಸ್ ಯೂನಿಟ್‌ಗಳು ಸ್ಥಗಿತಗೊಳ್ಳುವ ಸ್ಥಿತಿಯಲ್ಲಿವೆ.
ಬಳ್ಳಾರಿ ಜೀನ್ಸ್ ಉಡುಪುಗಳಿಗೆ ದಕ್ಷಿಣ ಭಾರತ ಸೇರಿದಂತೆ ವಿದೇಶಗಳಲ್ಲೂ ಬೇಡಿಕೆಯಿದೆ. ಇಲ್ಲಿನ ಜೀನ್ಸ್ ಉದ್ಯಮ ಎಷ್ಟರ ಮಟ್ಟಿಗೆ ಖ್ಯಾತಿ ಹೊಂದಿದೆಯೋ ಅಷ್ಟೇ ಶಾಪಗ್ರಸ್ಥ ಸ್ಥಿತಿಯನ್ನೂ ಎದುರಿಸುತ್ತಿದೆ. ಪ್ರಮುಖವಾಗಿ ಬೇಸಿಗೆಯಲ್ಲಿ ಜೀನ್ಸ್ ಯೂನಿಟ್‌ಗಳಿಗೆ ಅಗತ್ಯ ನೀರು ಪೂರೈಕೆಯಾಗುವುದಿಲ್ಲ. ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಾರಿಯಂತೂ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಟ್ಯಾಂಕರ್ ನೀರು ಖರೀದಿಗೂ ಆಸ್ಪದವಾಗುತ್ತಿಲ್ಲ ಎಂದು ಜೀನ್ಸ್ ಯೂನಿಟ್ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.20 ಜೀನ್ಸ್ ಯೂನಿಟ್ ಬಂದ್:
ಟ್ಯಾಂಕರ್ ನೀರು ದುಬಾರಿಯಾಗಿರುವುದರಿಂದ ಹೊರಗಡೆಯಿಂದ ನೀರು ಖರೀದಿಸಿದರೆ, ವಾಷಿಂಗ್ ಯೂನಿಟ್ ನಿರ್ವಹಣೆ ಕಷ್ಟಸಾಧ್ಯ ಎನ್ನುವ ಜೀನ್ಸ್ ಉದ್ಯಮಿಗಳು, ಜೀನ್ಸ್ ಯೂನಿಟ್‌ಗಳನ್ನು ಸ್ಥಗಿತಗೊಳಿಸುವುದು ಅನಿಯವಾರ್ಯ ಎನ್ನುತ್ತಾರೆ.
ಬಳ್ಳಾರಿಯ ಜೀನ್ಸ್ ಯೂನಿಟ್‌ಗಳು ಪ್ರತಿಬಾರಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಿಸುತ್ತವೆ. ಆದರೆ, ಈ ಬಾರಿ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಅಭಾವ ಮತ್ತಷ್ಟು ಹೆಚ್ಚಿದೆ. ಕೆಲವು ಜೀನ್ಸ್ ಉದ್ಯಮಿಗಳು, ದೂರದ ಪ್ರದೇಶಗಳಿಂದ ಬೋರ್‌ವೆಲ್ ನೀರನ್ನು ತರಲು ಪೈಪ್‌ಲೈನ್ ಮಾಡಿಕೊಂಡಿದ್ದಾರೆ. ಬರದ ತೀವ್ರತೆಯಿಂದಾಗಿ ಬಹುತೇಕ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೀರಿಲ್ಲದೆ ಈಗಾಗಲೇ 20 ಜೀನ್ಸ್ ಯೂನಿಟ್‌ಗಳು ಬಂದ್ ಆಗಿವೆ. ಕೆಲವು ಯೂನಿಟ್‌ಗಳು ಟ್ಯಾಂಕರ್ ನೀರನ್ನು ಆಶ್ರಯಿಸಿವೆ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಉಳಿದ ಯೂನಿಟ್‌ಗಳು ಬಂದ್ ಆಗಲಿವೆ ಎನ್ನುತ್ತಾರೆ ಜೀನ್ಸ್ ಉದ್ಯಮಿ ಪೋಲ್ಯಾಕ್ಸ್ ಮಲ್ಲಿಕಾರ್ಜುನ.