ಕನ್ನಡಪ್ರಭ ವಾರ್ತೆ ಬ್ಯಾಡಗಿ
ಮುಂಬರುವ ಲೋಕಸಭೆ ಚುನಾವಣೆ ದೇಶದ ಹಣೆಬರಹ ಬದಲಾಯಿಸುವ ಚುನಾವಣೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಾತ್ರ ದೇಶದಲ್ಲಿನ ಕೋಟ್ಯಂತರ ಬಡವರು ಕಂಡಿರುವ ಕನಸು ನನಸಾಗಲಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಪಟ್ಟಣದ ಸಂಗಮೇಶ್ವರ ನಗರದಲ್ಲಿನ ತಮ್ಮ ಸ್ವನಿವಾಸದಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಕುರುಬ ಹಾಗೂ ಉಪ್ಪಾರ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಬಳಸಿಕೊಂಡು ಬಿಜೆಪಿ ಲೋಕಸಭೆ ಚುನಾವಣೆ ಭಾವನಾತ್ಮವಾಗಿ ಜನರ ಮನಸ್ಸನ್ನ ಗೆಲ್ಲುವ ತಂತ್ರವಾಗಿದೆ. ಎಂದಿಗೂ ಇದು ಫಲಿಸಲು ಸಾಧ್ಯವಿಲ್ಲ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ರಾಮಣ್ಣ ಉಕ್ಕುಂದ ಮಾತನಾಡಿ, ಬಿಜೆಪಿ ದುರಾಡಳಿತದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಕೆಟ್ಟ ವಾತಾವರಣವಿದೆ. ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಬದಲು ದೇಶದಲ್ಲಿ ರಾಮಮಂದಿರ ಕಟ್ಟಿದರೆ ಹೊಟ್ಟೆ ತುಂಬುತ್ತಾ, ಪುಲ್ವಾಮ ದಾಳಿ ಮಾಡಿಸಿ ಕಳೆದ ಬಾರಿಯ ಲೋಕಸಭಾ ಚುನಾವಣೆಯನ್ನು ಬಿಜೆಪಿ ಗೆದ್ದಿದ್ದಾಗಿದೆ, ಈ ಬಾರಿ ರಾಮನ ಜಪ ಮಾಡಿಸಿ ಗೆಲ್ಲಲು ಹುನ್ನಾರ ನಡೆಸುತ್ತಿದ್ದಾರೆ, ಇದು ಯಾವತ್ತಿಗೂ ಸಾಧ್ಯವಿಲ್ಲ ಎಂದರು.ಸುರೇಶ ಯಮನಕ್ಕನವರ, ನಾಗರಾಜ ಆನ್ವೇರಿ, ವಿರೇಶ ಮತ್ತಿಹಳ್ಳಿ, ಮಲ್ಲಿಕಾರ್ಜುನ ಕರಿಲಿಂಗಣ್ಣನವರ ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಸಭೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಚಿಕ್ಕಪ್ಪ ಹಾದೀಮನಿ, ಬೀರಪ್ಪ ಬಣಕಾರ, ಖಾದರಸಾಬ್ ದೊಡ್ಮನಿ ಶಂಭನಗೌಡ ಪಾಟೀಲ, ಬಸವರಾಜ ಬಳ್ಳಾರಿ. ಗೀರಿಶ ಇಂಡಿಮಠ, ಸುರೇಶ ಅಂಗಡಿ, ಸೇರಿದಂತೆ ಹಲವರು ಭಾಗಿಯಾ ಗಿದ್ದರು.