2025ರ ಏ. 4ರಂದು ಇಟಗಿಯ ರಾಮೇಶ್ವರ ದೇವರ ಅಷ್ಟಬಂಧ: ಚಂದ್ರಶೇಖರ ಹೆಗಡೆ

KannadaprabhaNewsNetwork |  
Published : Sep 05, 2024, 12:30 AM IST
ಫೋಟೊಪೈಲ್- ೪ಎಸ್ಡಿಪಿ೨- ಸಿದ್ದಾಪುರ ತಾಲ್ಲೂಕಿನ ಇಟಗಿಯ ಶ್ರೀ ರಾಮೇಶ್ವರ ದೇವಾಲಯದ ಸಭಾಭವನದಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಷ್ಟಬಂಧ ಕಾರ್ಯಕ್ರಮದ  ಮನವಿ ಪತ್ರವನ್ನು  ಅನಾವರಣಗೊಳಿಸಲಾಯಿತು. | Kannada Prabha

ಸಾರಾಂಶ

ದೇವಾಲಯದಲ್ಲಿ ೨೦೨೫ರ ಏ. ೪ರಂದು ಅಷ್ಟಬಂಧ ಕಾರ್ಯಕ್ರಮ ಮತ್ತು ತನ್ನಿಮಿತ್ತ ೧೩ ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಸಿದ್ದಾಪುರ: ತಾಲೂಕಿನ ಪುರಾತನ ಕಾಲದ ದೇವಾಲಯಗಳಲ್ಲಿ ಇಟಗಿಯ ರಾಮೇಶ್ವರ ದೇವಾಲಯವೂ ಒಂದು. ಬಿಳಗಿ ಸೀಮಾ ವ್ಯಾಪ್ತಿಯ ಈ ದೇವಾಲಯದಲ್ಲಿ ಸುಮಾರು ೭ ಶತಮಾನಗಳ ಪರಂಪರೆಯನ್ನು ಅನೂಚಾನವಾಗಿ ದೇವಾಲಯದಲ್ಲಿ ಪಾಲಿಸುತ್ತಾ ಬರಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಹೆಗಡೆ ಕೊಡ್ತಗಣಿ ತಿಳಿಸಿದರು.ಬುಧವಾರ ತಾಲೂಕಿನ ಇಟಗಿಯ ರಾಮೇಶ್ವರ ದೇವಾಲಯದ ಸಭಾಭವನದಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ಪೂರ್ವಭಾವಿ ಸಭೆ ಮತ್ತು ಮನವಿ ಪತ್ರದ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಾಲಯದಲ್ಲಿ ೨೦೨೫ರ ಏ. ೪ರಂದು ಅಷ್ಟಬಂಧ ಕಾರ್ಯಕ್ರಮ ಮತ್ತು ತನ್ನಿಮಿತ್ತ ೧೩ ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು ₹೧.೫ ಕೋಟಿ ಅಂದಾಜು ಮಾಡಲಾಗಿದೆ. ಬಿಳಗಿ ಸೀಮೆಯ ಜಾತಿ, ಮತ ಬೇಧವಿಲ್ಲದೇ ಪ್ರತಿಯೊಂದು ಮನೆಯನ್ನೂ ಸಂಪರ್ಕಿಸಿ ಭಕ್ತಾದಿಗಳನ್ನು ದೇವರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಮುಖ್ಯ ಉದ್ದೇಶ. ಅಷ್ಟಬಂಧ ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಕೋಟಿ ರು. ವೆಚ್ಚ ತಗುಲುವ ಸಾಧ್ಯತೆ ಇದ್ದು, ಹಣದ ಕ್ರೋಢೀಕರಣವನ್ನು ಮಾಡಬೇಕಿದೆ. ಕಳೆದ ೧೩ ವರ್ಷಗಳಿಂದ ಸುಮಾರು ಐದೂವರೆ ಕೋಟಿ ರು. ದೇವಾಲಯದ ಕಟ್ಟಡ ಕಾರ್ಯಕ್ಕೆ ವಿನಿಯೋಗವಾಗಿದೆ. ಈ ಹಿಂದಿನಂತೆ ಈ ಕಾರ್ಯಕ್ರಮದಲ್ಲೂ ಎಲ್ಲ ಭಕ್ತಾದಿಗಳು ಸಹಕಾರ ನೀಡಬೇಕು ಎಂದರು. ಅಷ್ಟಬಂಧ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ಮರಗಳಿಗೆ ಬೇರು ಹೇಗೆ ಆಧಾರವಾಗಿದೆಯೋ ಅದೇ ರೀತಿ ರಾಮೇಶ್ವರ ದೇವಾಲಯ ಬಿಳಗಿ ಸೀಮೆಗೆ ಆಧಾರವಾಗಿದೆ. ಅನೇಕ ಹಿರಿಯರ ಪರಂಪರೆ ಈ ದೇವಾಲಯದಲ್ಲಿ ಸಾಗಿಬಂದಿದೆ. ಈ ಕಾರ್ಯಕ್ರಮದಲ್ಲಿ ಹಣದ ಜತೆಗೆ ಮಾನವ ಸಂಪನ್ಮೂಲದ ಅವಶ್ಯಕತೆಯೂ ಇದ್ದು, ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರತಿ ೧೨ ವರ್ಷಕ್ಕೆ ಒಮ್ಮೆ ನಡೆಯಬೇಕಾದ ಅಷ್ಟಬಂಧ ಕಾರ್ಯ ೫೭ ವರ್ಷಗಳ ನಂತರ ನಡೆಯುತ್ತಿದೆ. ಸೀಮೆಯ ಭಕ್ತರು ಜಾತಿ, ಧರ್ಮ, ಪಂಥವನ್ನು ಮೀರಿ ದೇವರ ಕಾರ್ಯದಲ್ಲಿ ಒಂದಾದರೆ ಸೀಮೆಗೆ ಸಾರ್ಥಕತೆ ಸಿಗುತ್ತದೆ ಎಂದರು. ಗೋಕರ್ಣದ ಅಶೋಕೆ ವಿ.ವಿ. ಮುಖ್ಯಸ್ಥ ಆರ್.ಎಸ್. ಹೆಗಡೆ ಹರಗಿ, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ನಾಟ್ಯ ವಿನಾಯಕ ದೇವಾಲರ್ಯದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅಷ್ಟಬಂಧ ಕಾರ್ಯಕ್ರಮದ ಕುರಿತು ಮಾತನಾಡಿದರು. ಭಾಸ್ಕರ ಹೆಗಡೆ, ವೆಂಕಟರಮಣ ಹೆಗಡೆ, ಎಸ್.ಆರ್. ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ರಾಮಕೃಷ್ಣ ಹೆಗಡೆ ಕೆಳಗಿನಮನೆ, ಅಷ್ಟಬಂಧ ಸಮಿತಿ ಗೌರವ ಕಾರ್ಯದರ್ಶಿ ನಾರಾಯಣಮೂರ್ತಿ ಹೆಗಡೆ, ಜಿ.ಕೆ. ಭಟ್ ಭಟ್ಟರಕೇರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಷ್ಟಬಂಧ ಕಾರ್ಯಕ್ರಮದ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಅಷ್ಟಬಂಧ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಶಶಿಭೂಷಣ ಹೆಗಡೆ, ಕಾರ್ಯಾಧ್ಯಕ್ಷರಾಗಿ ಚಂದ್ರಶೇಖರ ಹೆಗಡೆ ಕೊಡ್ತಗಣಿ, ಗೌರವ ಕಾರ್ಯದರ್ಶಿಯಾಗಿ ಮೂರ್ತಿ ಹೆಗಡೆ ಹರಗಿ, ಕಾರ್ಯದರ್ಶಿಯಾಗಿ ವಿನಾಯಕ ಹೊನ್ನೆಮಡಿಕೆಯವರ ಹೆಸರುಗಳನ್ನು ಘೋಷಿಸಲಾಯಿತು. ಗಜಾನನ ಹೆಗಡೆ ಕೊಡ್ತಗಣಿ ಸ್ವಾಗತಿಸಿ, ವಂದಿಸಿದರು. ವಿನಾಯಕ ಹೊನ್ನೆಮಡಿಕೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ