ಬಾಡಿಗೆ ಕಟ್ಟಡದಲ್ಲಿ 203 ಅಂಗನವಾಡಿಗಳು

KannadaprabhaNewsNetwork |  
Published : May 13, 2026, 01:30 AM IST
ಸಾಂಧರ್ಭಿಕ ಚಿತ್ರ | Kannada Prabha

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ 203 ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು, ಕಾರ್ಯಕರ್ತೆಯರಿಗೆ ಇಲಾಖೆ ನೀಡುವ ನಿರ್ದಿಷ್ಟ ಹಣದಲ್ಲಿ ಸುರಕ್ಷಿತ ಅಂಗನವಾಡಿ ಕಟ್ಟಡಗಳನ್ನು ಹುಡುಕುವುದೇ ಸವಾಲಾಗಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ 203 ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು, ಕಾರ್ಯಕರ್ತೆಯರಿಗೆ ಇಲಾಖೆ ನೀಡುವ ನಿರ್ದಿಷ್ಟ ಹಣದಲ್ಲಿ ಸುರಕ್ಷಿತ ಅಂಗನವಾಡಿ ಕಟ್ಟಡಗಳನ್ನು ಹುಡುಕುವುದೇ ಸವಾಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 1591 ಅಂಗನವಾಡಿ ಕೇಂದ್ರಗಿಳಿದ್ದು, 1283 ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. 203 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬೇರೆ ಬೇರೆ ಇಲಾಖೆಗಳ ಕಟ್ಟಡ ಸೇರಿದಂತೆ ಇತರೆ ಕಟ್ಟಡಗಳಲ್ಲಿ 105 ಕೇಂದ್ರಗಳು ನಡೆಯುತ್ತಿವೆ. ವಿವಿಧ ಯೋಜನೆಗಳಡಿ 48 ಸ್ವಂತ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 90 ಕೇಂದ್ರಗಳಿಗೆ ಪ್ರಸ್ತಾವನೆ ಸಲ್ಲಿಸಿ ಕಟ್ಟಡ ಮಂಜೂರಾಗಿದೆ, ಪ್ರಸ್ತಾವನೆ ಸಲ್ಲಿಸಿದರೂ 81ಕೇಂದ್ರಗಳಿಗೆ ಕಟ್ಟಡ ಮಂಜೂರು ಆಗಿಲ್ಲ.

ಈಗಿನ ಮಾಹಿತಿ ಪ್ರಕಾರ ಜಿಲ್ಲೆಯ ನಗರ ಪ್ರದೇಶದಲ್ಲಿ 134, ಗ್ರಾಮೀಣ ಪ್ರದೇಶದಲ್ಲಿ 69 ಸೇರಿದಂತೆ ಒಟ್ಟು 203 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದರಲ್ಲಿ ಹೊಸಪೇಟೆ ನಗರದಲ್ಲಿ 110 ಮತ್ತು ತಾಲೂಕಿನ ಗ್ರಾಮೀಣ ಭಾಗದಲ್ಲಿ 20 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ.

ಇದೇ ರೀತಿ ಹೂವಿನಹಡಗಲಿ ತಾಲೂಕಿನಲ್ಲಿ 237 ಅಂಗನವಾಡಿ ಕೇಂದ್ರಗಳಲ್ಲಿ 208 ಸ್ವಂತ ಕಟ್ಟಡಗಳನ್ನು ಹೊಂದಿದ್ದು, 15 ಬಾಡಿಗೆ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 226ರಲ್ಲಿ 214 ಸ್ವಂತ, 5 ಬಾಡಿಗೆ ಕೇಂದ್ರಗಳು, ಹರಪನಹಳ್ಳಿ ತಾಲೂಕಿನಲ್ 396ರಲ್ಲಿ 342 ಕೇಂದ್ರಗಳು ಸ್ವಂತ, 32 ಬಾಡಿಗೆ, ಕೊಟ್ಟೂರು ತಾಲೂಕಿನಲ್ಲಿ 112ರಲ್ಲಿ 96 ಸ್ವಂತ, 5 ಬಾಡಿಗೆ, ಕೂಡ್ಲಿಗಿ ತಾಲೂಕಿನಲ್ಲಿ 277ರಲ್ಲಿ 242 ಸ್ವಂತ, 16 ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿಗಳು ನಡೆಯುತ್ತಿವೆ. ಜಿಲ್ಲೆಯಲ್ಲಿಯೇ ಹೊಸಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು 130 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಜಿಲ್ಲಾ ಕೇಂದ್ರವಾದ ಹೊಸಪೇಟೆ ನಗರದಲ್ಲೇ 110 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ.

ಸರ್ಕಾರ ನಗರ ಪ್ರದೇಶದಲ್ಲಿ ಬಾಡಿಗೆ ಅಂಗನವಾಡಿ ಕೇಂದ್ರಗಳಿಗೆ ಮಾಸಿಕ ₹6,000 ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕೇಂದ್ರಗಳಿಗೆ ₹2000 ಪಾವತಿಸುತ್ತದೆ. ಈಗ ನಗರ ಮತ್ತು ಗ್ರಾಮೀಣ ಎರಡೂ ಕಡೆ ಸರ್ಕಾರದ ಈ ನಿರ್ದಿಷ್ಟ ಹಣ ಸಾಕಾಗುತ್ತಿಲ್ಲ. ಹೀಗಾಗಿ, ಈ ಮೊತ್ತವನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ಅಂಗನವಾಡಿ ಕಾರ್ಯಕರ್ತೆಯರದ್ದು.

ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕನ್ನಡಪ್ರಭ ಜೊತೆ ಮಾತನಾಡಿ, ಸರ್ಕಾರ ನೀಡುವ ಹಣದಲ್ಲಿ ನಗರ ಪ್ರದೇಶದಲ್ಲಿ ಬಾಡಿಗೆ ಸಿಗುವುದು ಕಷ್ಟ. ಸಿಕ್ಕರೂ ಮಕ್ಕಳ ಸುರಕ್ಷತೆಗೆ ವ್ಯವಸ್ಥೆ ಇರುವುದಿಲ್ಲ. ಎಲ್ಲ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿರುವ ಕಟ್ಟಡ ಹುಡುಕಬೇಕು. ಸರ್ಕಾರ ನೀಡುವ ಬಾಡಿಗೆ ಹಣ ಸಾಲಲ್ಲ. ಹಣವನ್ನು ಹೆಚ್ಚಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಈ ಕುರಿತು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರು ಕಲ್ಪಿಸಲು ಮುಂದಾಗಬೇಕು ಎನ್ನುವುದು ಎಲ್ಲರ ಬೇಡಿಕೆಯಾಗಿದೆ.

ಹೊಸಪೇಟೆ ನಗರ ಜಿಲ್ಲಾ ಕೇಂದ್ರವಾಗಿರುವುದರಿಂದ ಕಟ್ಟಡಗಳ ಬಾಡಿಗೆ ಹೆಚ್ಚಾಗಿದೆ. ಅದರಲ್ಲೂ ಅಂಗನವಾಡಿ ಕೇಂದ್ರಗಳಿಗೆ ಕೆಲವರು ಬಾಡಿಗೆ ಕಟ್ಟಡಗಳನ್ನು ನೀಡುವುದಿಲ್ಲ. ಬಾಡಿಗೆ ತಿಂಗಳು, ತಿಂಗಳು ಬರುವುದಿಲ್ಲ ಎಂದು ತಿಳಿದು ಇನ್ನೂ ಕೆಲವರು ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ನೀಡದಿರುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಕೆ. ನಾಗರತ್ನಮ್ಮ ತಿಳಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 48 ಅಂಗನವಾಡಿ ಕೇಂದ್ರಗಳ ಕಟ್ಟಡ ಪ್ರಗತಿಯಲ್ಲಿವೆ. ವಿವಿಧ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಿ 90 ಕಟ್ಟಡ ಮಂಜೂರಾಗಿ ಪ್ರಗತಿಯಲ್ಲಿವೆ. ಕೆಎಂಇಆರ್‌ಸಿ ಯೋಜನೆಯಡಿ 81 ಕಟ್ಟಡಗಳಿಗೆ ಅನುಮೋದನೆ ದೊರೆತಿದೆ ಎಂದು ವಿಜಯನಗರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಗಂಗಪ್ಪ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟ್ಸಾಪ್ ಮೂಲಕ ಮಾವಿನ ಹಣ್ಣು ವ್ಯಾಪಾರ
ತಂತ್ರಜ್ಞಾನದ ಸದ್ಭಳಕೆಯಿಂದ ದೇಶ ಪ್ರಗತಿ: ಕರಿಗೂಳಿ