209 ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ಕಟ್ಟಡ!

KannadaprabhaNewsNetwork | Published : Jun 12, 2024 12:30 AM

ಸಾರಾಂಶ

ಜಿಲ್ಲೆಯ ಗದಗ, ನರಗುಂದ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡ ತಾಲೂಕು ವ್ಯಾಪ್ತಿಗಳು ಸೇರಿದಂತೆ ಎಲ್ಲ ತಾಲೂಕುಗಳಲ್ಲಿಯೂ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳ ಕೊರತೆ ಇದೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಮಕ್ಕಳ ವೈಯಕ್ತಿಕ ಮತ್ತು ಸಮಗ್ರ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಿವೆ. ಜಿಲ್ಲೆಯ 209 ಅಂಗನವಾಡಿ ಕೇಂದ್ರಗಳಿಗೆ ಇದುವರೆಗೂ ಸ್ವಂತ ಕಟ್ಟಡಗಳೇ ಇಲ್ಲ. ಹಾಗಾಗಿ ಅವೆಲ್ಲಾ ಕೇಂದ್ರಗಳು ಬಾಡಿಗೆ ಕಟ್ಟಡ ಅಥವಾ ದೇವಸ್ಥಾನಗಳಲ್ಲಿ ನಡೆಯುತ್ತಿವೆ.

ಜಿಲ್ಲೆಯ ಗದಗ, ನರಗುಂದ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡ ತಾಲೂಕು ವ್ಯಾಪ್ತಿಗಳು ಸೇರಿದಂತೆ ಎಲ್ಲ ತಾಲೂಕುಗಳಲ್ಲಿಯೂ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳ ಕೊರತೆ ಇದೆ. ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸ್ಥಳೀಯರ ಸಹಾಯ, ಸಹಕಾರದಿಂದ ಕೇಂದ್ರಗಳನ್ನು ಮುನ್ನಡೆಸುತ್ತಿದ್ದಾರೆ.

1248 ಅಂಗನವಾಡಿ ಕೇಂದ್ರಗಳುಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 1248 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 929 ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇನ್ನುಳಿದ 209 ಕೇಂದ್ರಗಳು ಇಂದಿಗೂ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಇಲಾಖೆ ಬಾಡಿಗೆ ಹಣವನ್ನು ಕೂಡಾ ಭರಿಸಲಾಗುತ್ತಿದೆ. 110 ಇತರೆ ಸರ್ಕಾರಿ ಕಟ್ಟಡಗಳಲ್ಲಿ

ಜಿಲ್ಲೆಯ ವಿವಿಧ ಸಮುದಾಯ ಭವನಗಳಲ್ಲಿ 65, ಗ್ರಾಮ ಪಂಚಾಯ್ತಿ ಕಟ್ಟಡಗಳಲ್ಲಿ 2, ಯುವಕ ಮಂಡಳಿದಲ್ಲಿ 4, ಶಾಲೆಗಳಲ್ಲಿ 39 ಸೇರಿದಂತೆ 110 ಅಂಗನವಾಡಿ ಕೇಂದ್ರಗಳು ಸರ್ಕಾರಿ ಸ್ವಾಮ್ಯದ ವಿವಿಧ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದರ ಹೊರತಾಗಿಯೂ 209 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇಲ್ಲದೇ ಸೊರಗುತ್ತಿವೆ.

77 ಬಾಡಿಗೆ ಕಟ್ಟಡ

ಗದಗ ತಾಲೂಕಿನಲ್ಲಿ ಅತೀ ಹೆಚ್ಚು 77 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ, ಮುಂಡರಗಿ ತಾಲೂಕಿನಲ್ಲಿ 7, ನರಗುಂದದಲ್ಲಿ 40, ರೋಣ 54, ಶಿರಹಟ್ಟಿಯಲ್ಲಿ 31 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 209 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಗದಗ ತಾಲೂಕಿನಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು 360 ಅಂಗನವಾಡಿ ಕೇಂದ್ರಳಿದ್ದು, 231 ಸ್ವಂತ ಕಟ್ಟಡದಲ್ಲಿ, 30 ಸಮುದಾಯ ಭವನದಲ್ಲಿ, ಯುವಕ ಮಂಡಳದಲ್ಲಿ 2, ಶಾಲೆಗಳಲ್ಲಿ 20, ಬಾಡಿಗೆ ಕಟ್ಟಡದಲ್ಲಿ 77 ಕೇಂದ್ರಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಸ್ವಂತ ಕಟ್ಟಡಗಳಲ್ಲಿದ 209 ಅಂಗನವಾಡಿ ಕೇಂದ್ರಗಳಲ್ಲಿ 129 ಅಂಗನವಾಡಿ ಕೇಂದ್ರಗಳು ಇರುವುದು ಜಿಲ್ಲಾ ಕೇಂದ್ರವಾಗಿರುವ ಗದಗ ತಾಲೂಕಿನಲ್ಲಿಯೇ ಎನ್ನುವುದು ಗಮನಾರ್ಹ ಸಂಗತಿ.

ವರದಿ ಸಲ್ಲಿಕೆ

ಜಿಲ್ಲೆಯಲ್ಲಿ ಸ್ವಂತ ಕಟ್ಟಡಗಳಲ್ಲಿದ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳ ನಿರ್ಮಾಣಕ್ಕಾಗಿ ಗ್ರಾಪಂ, ಸ್ಥಳೀಯ ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ವರದಿ ಕೂಡಾ ಸಲ್ಲಿಸಲಾಗಿದೆ.

ಪರಶುರಾಮ ಶೆಟ್ಟೆಪ್ಪನವರ. ಉಪನಿರ್ದೇಶಕರು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ.

Share this article