ಕಿಶೋರ್ ಎಂಬಾತಗೆ ನನ್ನ ಶೆಡ್ ಬಾಡಿಗೆಗೆ ನೀಡಿದ್ದೇನೆ
‘ನಮ್ಮ ಶೆಡ್‌ನಲ್ಲಿ ನಡೆದಿರುವ ರೇಣುಕಾಸ್ವಾಮಿ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಶೆಡ್ ಅನ್ನು ಬಾಡಿಗೆಗೆ ಕೊಟ್ಟಿದ್ದೇನೆ’ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ ಶೆಡ್ ಮಾಲೀಕ ಪಟ್ಟಣಗೆರೆ ಜಯಣ್ಣ ಸ್ಪಷ್ಟಪಡಿಸಿದ್ದಾರೆ.
ನಟ ದರ್ಶನ್ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿದ ಅವರು, ‘ಯಾರೇ ಆಗಲಿ ಕೊಲೆ ಮಾಡುವ ಮಟ್ಟಿಗೆ ಹೋಗಬಾರದು’ ಎಂದರು.‘ನಮ್ಮ ಜಾಗದಲ್ಲಿ ಈ ರೀತಿಯ ಘಟನೆ ನಡೆದಿರುವುದು ಮನಸ್ಸಿಗೆ ನೋವಾಗಿದೆ. ಆ ಶೆಡ್ ಜಾಗವನ್ನು ಕಿಶೋರ್ ಎಂಬುವರಿಗೆ ಬಾಡಿಗೆ ಕೊಟ್ಟಿದ್ದೇನೆ. ಸಾಲ ಕಟ್ಟದ ವಾಹನಗಳನ್ನು ಜಪ್ತಿ ಮಾಡಿ ಆ ಶೆಡ್‌ನಲ್ಲಿ ನಿಲ್ಲಿಸಲಾಗುತ್ತದೆ. ಬಾಡಿಗೆ ನೀಡಿದ ಬಳಿಕ ನಾನು ಆ ಜಾಗಕ್ಕೆ ಹೋಗಿಲ್ಲ. ನನಗೂ ಈ ಕೊಲೆಗೆ ಸಂಬಂಧವಿಲ್ಲ’ ಎಂದರು.
‘ದರ್ಶನ್ ಜತೆ ನನ್ನ ಸೋದರಿ ಪುತ್ರ ವಿನಯ್‌ಗೆ ಸ್ನೇಹವಿತ್ತು. ಈ ಕೊಲೆ ಪ್ರಕರಣದಲ್ಲಿ ಆತನ ಹೆಸರು ಕೇಳಿ ಬಂದಿದೆ. ಆದರೆ ನಮ್ಮ ಕುಟುಂಬ ಮತ್ತು ಸೋದರಿ ಕುಟುಂಬ ಪ್ರತ್ಯೇಕವಾಗಿ ವಾಸವಾಗಿದ್ದೇವೆ. ಹಾಗಾಗಿ ನನಗೆ ವಿನಯ್‌ನ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ’ ಎಂದು ಜಯಣ್ಣ ಸ್ಪಷ್ಟಪಡಿಸಿದರು.