ಕುವೈತ್ ಉದ್ಯಮಿಯಿಂದ ಸ್ವಗ್ರಾಮ ಸ್ವಚ್ಛತೆ

KannadaprabhaNewsNetwork | Published : Jun 12, 2024 12:30 AM

ಸಾರಾಂಶ

ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಾರ್ಡ ನಂ. 6ರ ಮಲೆಯಾಳಿ ಕಾಲೋನಿಯಲ್ಲಿ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ತಮ್ಮ ಸ್ವಂತ ಖರ್ಚಿನಿಂದ ಗಿಡಗಂಟಿಗಳನ್ನು ತೆರವುಗೊಳಿಸಿರುವುದು.

ಮೂಲತಃ ಬಿ.ಕಣಬೂರಿನವರಾದ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಕಾರ್ಯಕ್ಕೆ ಮೆಚ್ಚುಗೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 6ರ ವಿವಿಧ ಗಲ್ಲಿಗಳನ್ನು ಕುವೈತ್‌ನಲ್ಲಿ ಉದ್ಯಮಿಯಾಗಿರುವ ಸ್ಥಳೀಯರೇ ಆದ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ತಮ್ಮ ಸ್ವಂತ ಖರ್ಚಿನಲ್ಲಿ ಸ್ವಚ್ಛಗೊಳಿಸುವ ಮೂಲಕ ಗಮನಸೆಳೆದಿದ್ದಾರೆ.

ಇಲ್ಲಿನ ಮಲೆಯಾಳಿ ಕಾಲೋನಿ, ಐಟಿಐ ರಸ್ತೆ ಮುಂತಾದ ಕಡೆಗಳಲ್ಲಿ ಚರಂಡಿಗಳು ಮಣ್ಣು, ಕಸ ಕಡ್ಡಿಗಳಿಂದ ತುಂಬಿ ಹೋಗಿದ್ದು, ಮಳೆಗಾಲದ ಸಂದರ್ಭದಲ್ಲಿ ನೀರು ರಸ್ತೆ ಮೇಲೆ ಹರಿದು ಸಮಸ್ಯೆಯಾಗುತಿತ್ತು. ಅದಲ್ಲದೇ ಅಲ್ಲಲ್ಲಿ ಮಳೆಯ ನೀರು ನಿಂತು ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿತ್ತು. ಇದರೊಂದಿಗೆ ವಾರ್ಡ್ ನ ಎಲ್ಲಾ ಉಪ ರಸ್ತೆಗಳ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದು ಜನ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಈ ಬಗ್ಗೆ ಸ್ಥಳೀಯ ಗ್ರಾಪಂ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಸಹ ರಸ್ತೆ ದುರಸ್ತಿಗೆ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರ ಗಮನವನ್ನು ಸ್ಥಳೀಯರು ಸೆಳೆದಾಗ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಾರ್ಡ್ನಲ್ಲಿರುವ ಎಲ್ಲಾ ಚರಂಡಿ ಸ್ವಚ್ಛಗೊಳಿಸಿ, ರಸ್ತೆ ಅಕ್ಕಪಕ್ಕದ ಗಿಡಗಂಟಿಗಳನ್ನು ಕಾರ್ಮಿಕರ ಮೂಲಕ ಕಡಿಸಿ ತೆರವುಗೊಳಿಸಿದ್ದಾರೆ.

ಇದರಿಂದಾಗಿ ಜನ, ವಾಹನ ಸಂಚಾರಕ್ಕೆ ಅನುಕೂಲವಾಗಿದ್ದು, ಚರಂಡಿಗಳು ಸ್ವಚ್ಛಗೊಳಿಸಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲಾರಂಭಿಸಿದೆ.

ಕ್ಲಿಫರ್ಡ್ ಅವರ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಲೆಯಾಳಿ ಕಾಲೋನಿ ನಿವಾಸಿ ಸಿದ್ದಿಕ್ ತಿಳಿಸಿದ್ದಾರೆ.

ಕ್ಲಿಫರ್ಡ್ ಲಾರೆನ್ಸ್ ಅವರು ಈ ಹಿಂದೆಯೂ ಹಲವು ಸಮಾಜಮುಖಿ ಕಾರ್ಯ ವಿದೇಶದಲ್ಲಿದ್ದುಕೊಂಡೆ ನಡೆಸಿದ್ದು, ಕರೋನಾ ಸಂದರ್ಭದಲ್ಲಿ ದಿನಸಿ, ಆರೋಗ್ಯ ಕಿಟ್ ವಿತರಣೆ, ನೆರೆ ಸಂದರ್ಭದಲ್ಲಿ ಸಂತ್ರಸ್ತರಿಗೆ ವಿವಿಧ ಸಾಮಗ್ರಿ ವಿತರಣೆ, ಕೂಲಿ ಕಾರ್ಮಿಕರ ಅನಾರೋಗ್ಯಕ್ಕೆ ಸಹಾಯಹಸ್ತ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸೇರಿ ವಿವಿಧ ಕಾರ್ಯ ನಡೆಸಿ ಗಮನ ಸೆಳೆದಿದ್ದರು.

Share this article