ಚಿತ್ರದುರ್ಗದಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

KannadaprabhaNewsNetwork |  
Published : Jun 12, 2024, 12:30 AM IST

ಸಾರಾಂಶ

25,045 ಮೆಟ್ರಿಕ್ ಟನ್ ರಸಗೊಬ್ಬರ, 35,000 ಬಿತ್ತನೆ ಬೀಜ ದಾಸ್ತಾನು,

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಯು ರೈತರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದೆ. ಪ್ರಸ್ತುತ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು, 25,045 ಮೆಟ್ರಿಕ್ ಟನ್ ರಸಗೊಬ್ಬರ ಹಾಗೂ 35,000 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಕಾರ್ಯವು ಸುಗಮವಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಜಿಲ್ಲೆಯ ವಾರ್ಷಿಕ ಮಳೆಯು 540ಮಿಮೀ ಇದೆ. 2024ರ ಜನವರಿಯಿಂದ ಜೂನ್-10 ರವರೆಗೆ 127 ಮಿಮೀ ವಾಡಿಕೆ ಮಳೆಯಾಗಬೇಕಿದ್ದು, ವಾಸ್ತವವಾಗಿ 203ಮಿಮೀ (ಹೆಚ್ಚುವರಿ ಶೇ.60) ಮಳೆ ಸುರಿದಿತ್ತು. ಬಳಿಕ ಜೂನ್-01 ರಿಂದ ಜೂನ್ 10ರ ವರೆಗಿನ 10 ದಿನಗಳಲ್ಲಿ 24ಮಿಮೀ ವಾಡಿಕೆ ಮಳೆಗಿಂತ 53ಮಿಮೀ ಮಳೆ (ಶೇ.121) ಸುರಿದಿದೆ. ಇದರಿಂದಾಗಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಹೆಚ್ಚು ಭರದಿಂದ ನಡೆಯುತ್ತಿವೆ.

35,000 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ತೊಗರಿ, ರಾಗಿ ಸೇರಿ ಒಟ್ಟು 31,801 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಕೆಎಸ್‍ಎಸ್‍ಸಿ, ಎನ್‍ಎಸ್‍ಸಿ, ಕೆಒಎಫ್ ಸಂಸ್ಥೆಗಳು ಹಾಗೂ ಖಾಸಗಿ ಬಿತ್ತನೆ ಬೀಜ ಸರಬರಾಜುದಾರ ಸಂಸ್ಥೆಗಳಲ್ಲಿ 35,000 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ವಿತರಣೆ ಕಾರ್ಯ ಪ್ರಾರಂಭವಾಗಿದ್ದು, 3,228 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ.

ಜಿಲ್ಲೆಯಲ್ಲಿ 7,70,702 ಹೆಕ್ಟೇರ್ ಭೌಗೋಳಿಕ ಪ್ರದೇಶವಿದ್ದು, ಮುಂಗಾರು ಹಂಗಾಮಿನಲ್ಲಿ 3,26,748 ಹೆಕ್ಟೇರ್ ಪ್ರದೇಶ ಸಾಗುವಳಿಗೆ ಸಜ್ಜಾಗಿದೆ. ಒಟ್ಟು 3,01,562 ರೈತರು ಸಾಗುವಳಿದಾರರಿದ್ದು, ಆ ಪೈಕಿ 1,19,034 ಅತೀ ಸಣ್ಣ ರೈತರು, 96,837 ಸಣ್ಣ ರೈತರು, 82,102 ಮದ್ಯಮ ರೈತರು ಹಾಗೂ 3,589 ದೊಡ್ಡ ರೈತರಿದ್ದಾರೆ.

25,045 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ (ಏಪ್ರಿಲ್-2024 ರಿಂದ ಸೆಪ್ಟೆಂಬರ್-2024 ವರೆಗೆ) ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ಸೇರಿ ಒಟ್ಟು 64,171 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಖಾಸಗಿ ಡೀಲರ್ಸ್, ಕೆಎಸ್ಎಸ್‌ಸಿ ಹಾಗೂ ಮಾರುಕಟ್ಟೆ ಫೆಡರೇಶನ್‌ ಮೂಲಕ 39,610 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದೆ ಮತ್ತು 14,565 ಮೆಟ್ರಿಕ್ ಟನ್ ವಿತರಣೆಯಾಗಿದ್ದು, 25,045 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.

ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗುವ ಕುರಿತಂತೆ ಹವಾಮಾನ ಇಲಾಖೆಯ ಮುನ್ಸೂಚನೆ ಇದ್ದು, ಇದಕ್ಕೆ ಪೂರಕವಾಗಿ ಪೂರ್ವ ಮುಂಗಾರು ಉತ್ತಮವಾಗಿದೆ. ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಜಿಲ್ಲೆಯ ರೈತರು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ತಿಳಿಸಿದ್ದಾರೆ.

ಶೇ.8.53ರಷ್ಟು ಬಿತ್ತನೆ ಪ್ರಗತಿ:

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿಗೆ 3,26,748 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದ್ದು, ಇಲ್ಲಿಯವರೆಗೆ 27,872 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು, ಶೇ.8.53ರಷ್ಟು ಪ್ರಗತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ನಾಯಕರ ಜತೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡ ಪ್ರೀತಂ ಗೌಡ
ಇಂದಿನಿಂದ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆ