ಅಪಘಾತ ತಡೆಗೆ ಜಿಲ್ಲೇಲಿ 21 ಅಪಘಾತ ವಲಯ ಗುರುತು

KannadaprabhaNewsNetwork |  
Published : Jul 14, 2026, 01:30 AM IST
13ಕೆಡಿವಿಜಿ2. 3-ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಡಾ.ಎಚ್.ಟಿ.ಶೇಖರ್. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಜೊತೆಗೆ ಅಪಘಾತ ನಿಯಂತ್ರಿಸಲು ಒಟ್ಟು 21 ಅಪಘಾತ ವಲಯಗಳನ್ನು ಗುರುತಿಸಿದ್ದು, ಅಂತಹ ವಲಯಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ಕೈಗೊಳ್ಳುವ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದನ್ವಯ ನಗರದ ಆಕ್ರಮಿತ ಫುಟ್‌ಪಾತ್ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಸುಪ್ರೀಂ ಕೋರ್ಟ್ ಆದೇಶದನ್ವಯ ದಾವಣಗೆರೆಯಲ್ಲೂ ಫುಟ್‌ಪಾತ್ ಅತಿಕ್ರಮಣ ಶೀಘ್ರ ತೆರವು: ಡಿಸಿ ಗಂಗಾಧರಸ್ವಾಮಿ ಹೇಳಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಜೊತೆಗೆ ಅಪಘಾತ ನಿಯಂತ್ರಿಸಲು ಒಟ್ಟು 21 ಅಪಘಾತ ವಲಯಗಳನ್ನು ಗುರುತಿಸಿದ್ದು, ಅಂತಹ ವಲಯಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ಕೈಗೊಳ್ಳುವ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದನ್ವಯ ನಗರದ ಆಕ್ರಮಿತ ಫುಟ್‌ಪಾತ್ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಜೀವ ಉಳಿದರೂ ಅದು ನಮಗೆ ಹೆಮ್ಮೆಯಾಗಿದ್ದು, ಮೂರು ವರ್ಷಗಳ ಅಪಘಾತದ ದತ್ತಾಂಶ ಪರಿಶೀಲಿಸಿ, ಎಲ್ಲ ಬ್ಲಾಕ್ ಸ್ಪಾಟ್‌ಗಳಲ್ಲಿ ಅಗತ್ಯ ಸುಧಾರಣೆ ತರಲು ವರದಿ ಸಿದ್ಧಪಡಿಸಲಾಗುವುದು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಗರದ ಆಕ್ರಮಿತ ಫುಟ್‌ಪಾತ್‌ಗಳನ್ನು ತೆರವುಗೊಳಿಸಲಾಗುವುದು ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ವರ್ಷ ಮಾರಣಾಂತಿಕ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷ 146 ಮಾರಣಾಂತಿಕ ಅಪಘಾತಗಳು ವರದಿಯಾಗಿದ್ದು, ಈ ಸಲ 139ಕ್ಕೆ ಇಳಿದಿದೆ. ಒಟ್ಟು 7 ಅಪಘಾತ ಕಡಿಮೆಯಾಗಿವೆ. ಪೊಲೀಸ್ ಇಲಾಖೆಯ ನಿರಂತರ ಕಾರ್ಯಾಚರಣೆ, ಸ್ಪಾಟ್ ಫೈನ್‌, ಹೆಲ್ಮೆಟ್ ಕಡ್ಡಾಯ ಜಾರಿ, ಅಪ್ರಾಪ್ತ ವಯಸ್ಕರ ಚಾಲನೆಗೆ ತಡೆ ಇಂತಹ ಕ್ರಮಗಳೇ ಅಪಘಾತ ತಡೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದರು.

ಹೆದ್ದಾರಿ ದೀಪಗಳು, ಸಿಸಿಟಿವಿ ಕ್ಯಾಮೆರಾಗಳಿಗೆ ವಿದ್ಯುತ್ ಸಂಪರ್ಕವನ್ನು ಯಾವುದೇ ವಿಳಂಬವಿಲ್ಲದೇ ಬೆಸ್ಕಾಂ ತುರ್ತಾಗಿ ಒದಗಿಸಬೇಕು. ಮಳೆಗಾಲ ಶುರುವಾಗಿದ್ದರಿಂದ ರಸ್ತೆಗಳ ಮೇಲಿನ ಗುಂಡಿಗಳನ್ನು ತಕ್ಷಣ ಮುಚ್ಚಲು ಹಾಗೂ ಫ್ಲೋರೊಸೆಂಟ್ ವೈಟ್ ಪೇಂಟಿಂಗ್ (ಮಾರ್ಕಿಂಗ್) ಮಾಡಲು ಪಾಲಿಕೆ ಮತ್ತು ಲೋಕೋಪಯೋಗಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅಗ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕಿರಿದಾದ ಸೇತುವೆಯೊಂದರ ಮೇಲೆ ಈಚೆಗೆ ನಡೆದ ಅಪಘಾತದಲ್ಲಿ ಟ್ರ್ಯಾಕ್ಟರ್‌ಗೆ ಇನ್ಶೂರೆನ್ಸ್ ಹಾಗೂ ಚಾಲಕನಿಗೆ ಲೈಸೆನ್ಸ್ ಇಲ್ಲದ್ದು ಕಂಡುಬಂದಿದೆ. ಟ್ರ್ಯಾಕ್ಟರನ್ನು ಇತರ ಉದ್ದೇಶಗಳಿಗೆ ಬಳಸುವುದು, ಕರ್ಕಶ ಶಬ್ದ ಮಾಡುವುದು, ಪರವಾನಗಿ ಇಲ್ಲದೇ ಚಾಲನೆ ಮಾಡುವವರ ವಿರುದ್ಧ ಆರ್‌ಟಿಒ ಅಧಿಕಾರಿಗಳು ವಿಶೇಷ ಜಾಗೃತಿ ಮತ್ತು ತಪಾಸಣಾ ಅಭಿಯಾನ ಹಮ್ಮಿಕೊಳ್ಳಬೇಕು. ಬಿತ್ತನೆ ಚಟುವಟಿಕೆ ಆರಂಭ ಆಗುತ್ತಿರುವುದರಿಂದ ರಸ್ತೆಗೆ ಇಳಿಯುವ ಎಲ್ಲಾ ಟ್ರ್ಯಾಕ್ಟರ್, ಬಂಡಿಗಳ ಹಿಂಭಾಗದಲ್ಲಿ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್ **(Reflective Stickers)** ಅಳವಡಿಸಬೇಕು ಎಂದು ಅವರು ತಿಳಿಸಿದರು.

ಕಳೆದ ತಿಂಗಳು ಶಾಲಾ ವಾಹನಗಳ ಚಾಲಕರ ತಪಾಸಣೆ ನಡೆಸಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಪ್ರಕರಣ ಪತ್ತೆ ಹಚ್ಚಿ ದಂಡ ವಿಧಿಸಲಾಗಿತ್ತು. ಮುಂದಿನ ದಿನಗಳಲ್ಲಿ ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಶಾಲಾ ಬಸ್‌ಗಳ ಫಿಟ್‌ನೆಸ್, ಮಿತಿಮೀರಿದ ಮಕ್ಕಳ ಸಾಗಣೆ ನಿಯಂತ್ರಿಸಬೇಕು, ಕೆಎಸ್ಆರ್‌ಟಿಸಿ, ಖಾಸಗಿ ಬಸ್‌ ಚಾಲಕರು, ಶಾಲಾ ಬಸ್‌ ಚಾಲಕರಿಗೆ ಡಿಡಿಪಿಐ, ಡಿಡಿಪಿಯು ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ಕಾರ್ಯಾಗಾರ ಏರ್ಪಡಿಸುವಂತೆ ಅವರು ಹೇಳಿದರು.

ಅಪಘಾತ ತೆಡೆಗೆ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಜನರು ಒತ್ತಾಯಿಸುತ್ತಾರೆ. ಅವೈಜ್ಞಾನಿಕ ಹಂಪ್ಸ್‌ಗಳಿಂದಲೇ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅವೈಜ್ಞಾನಿಕ ಉಬ್ಬುಗಳನ್ನು ತೆರವುಗೊಳಿಸಬೇಕಿದೆ. ಬದಲಿಗೆ ವೈಜ್ಞಾನಿಕವಾಗಿ ರಂಬ್ಲರ್‌ ಸ್ಟ್ರಿಪ್ಸ್ಅಳವಡಿಸಿ, ರಸ್ತೆಯ ಎರಡೂ ಬದಿ ಕನಿಷ್ಟ 20ರಿಂದ 50 ಮೀಟರ್ ದೂರದಲ್ಲೇ ಎಚ್ಚರಿಕೆ ಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಲೊಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಡಿಸಿ ಗಂಗಾಧರ ಸ್ವಾಮಿ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್, ಎನ್‌ಎಚ್‌ಎಐ ಅಧಿಕಾರಿ ಸುನಿಲ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು, ನಗರ ಪಾಲಿಕೆ ಎಂಜಿನಿಯರ್, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

- - -

(ಬಾಕ್ಸ್‌)

* ದೊಣೆಹಳ್ಳಿ ಬಳಿ ಅಪಘಾತ ವಲಯ, ಜಂಟಿ ಪರಿಶೀಲನೆ

- ಎಸ್‌ಎಸ್‌ ಹೈಟೆಕ್ ಆಸ್ಪತ್ರೆ ಬಳಿ ಅಂಡರ್ ಪಾಸ್ ಅಗಲೀಕರಣಕ್ಕೆ ಡಿಸಿ ಸೂಚನೆ ಕನ್ನಡಪ್ರಭ ವಾರ್ತೆ ದಾವಣಗೆರೆ ಜಗಳೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-50ರ ದೊಣೆಹಳ್ಳಿ ಬಳಿ ಸಣ್ಣ ಸೇತುವೆ ಕಿರಿದಾಗಿದ್ದು, ಗ್ರಾಮೀಣ ಲಿಂಕ್‌ ರಸ್ತೆಗಳಿಂದ ವಾಹನಗಳು ಅತೀ ವೇಗವಾಗಿ ಹೆದ್ದಾರಿಗೆ ಸೇರುತ್ತವೆ. ಅಲ್ಲಿ ಆಗುವ ಅಪಘಾತ, ಅನಾಹುತ, ಸಾವು- ನೋವುಗಳ ತಡೆಗೆ ಅಪಘಾತ ವಲಯವೆಂದು ಗುರುತಿಸಿದ್ದು, ರಸ್ತೆ ಅಗಲೀಕರಣ, ಅಗತ್ಯ ಮಾರ್ಪಾಡಿಗೆ ಜಂಟಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-48ರ ಅಂಡರ್‌ ಪಾಸ್‌ ಸೇತುವೆಯು ಎಸ್ಸೆಸ್ ಹೈಟೆಕ್‌ ಆಸ್ಪತ್ರೆ, ರಾಮನಗರ ಸೇರಿದಂತೆ ಅನೇಕ ಹಳ್ಳಿಗೆ ಸಂಪರ್ಕ ಕಲ್ಪಿಸುವ ಅಂಡರ್‌ ಪಾಸ್‌ ಬಹಳ ಕಿರಿದಾಗಿದ್ದು ಅಂಬುಲೆನ್ಸ್‌, ಲಾರಿ, ಬಸ್ಸುಗಳ ಸಂಚಾರಕ್ಕೆ ಬಹಳ ದುಸ್ತರವಾಗಿದೆ. ಆ ಅಂಡರ್‌ ಪಾಸ್‌ ಸೇತುವೆ ಅಗಲೀಕರಣಕ್ಕೆ ಎನ್‌ಎಚ್ಎಐ ಅಧಿಕಾರಿಗಳು ಮುಂದಾಗಲಿ ಎಂದರು.

ಕೇಂದ್ರದ ಪಿಎಂ ರಾಹತ್ ಯೋಜನೆಯಡಿ ರಸ್ತೆ ಅಪಘಾತ ಸಂತ್ರಸ್ಥರಿಗೆ ₹1.50 ಲಕ್ಷವರೆಗೆ ನಗದುರಹಿತ ಚಿಕಿತ್ಸೆ ನೀಡಲು ಅವಕಾಶವಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್‌ ಮಾತನಾಡಿ, ಹೆದ್ದಾರಿಯ ಹಲವು ಕಡೆ ಮೀಡಿಯನ್ (ರಸ್ತೆ ವಿಭಜಕ) ಗ್ಯಾಪ್‌ಗಳು ಇರುವುದರಿಂದ ಚಾಲಕರು ಆಹಾರ ಮತ್ತಿತರ ಕಾರಣಕ್ಕೆ ರಸ್ತೆ ದಾಟುವಾಗ ಭೀಕರ ಅಪಘಾತ ಸಂಭವಿಸುತ್ತಿವೆ. ವಿಶೇಷವಾಗಿ ಬಾಡಾ ಕ್ರಾಸ್ ಬಳಿ 4 ತಿಂಗಳಲ್ಲಿ 2ರಿಂದ 3 ಸಾವು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ, ವಾಹನ ಸವಾರರು, ಪಾದಚಾರಿಗಳು ನಿಯಮ ಬಾಹಿರವಾಗಿ ರಸ್ತೆ ದಾಟುವುದನ್ನು ತಡೆಯಲು ಮೀಡಿಯನ್‌ಗಳಿಗೆ ಕನಿಷ್ಠ 2ರಿಂದ 3 ಅಡಿ ಎತ್ತರದ ಕಬ್ಬಿಣದ ಮೆಶ್‌ಗಳನ್ನು ಎನ್‌ಎಚ್‌ಎಐನಿಂದ ಅಳ‍ವಡಿಸಬೇಕು. ರಾತ್ರಿವೇಳೆ ಆ ಭಾಗದಲ್ಲಿ ಹೈವೇ ಪೆಟ್ರೋಲಿಂಗ್ ವಾಹನ ನಿಯೋಜಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಇನ್ನು 8 ಕಡೆ ಸಿಗ್ನಲ್‌ಗಳ ಅಳವಡಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಒಂದು ಸಿಗ್ನಲ್‌ ನಿರ್ಮಿಸಲು ₹30 ಲಕ್ಷ ವೆಚ್ಚವಾಗುತ್ತದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ನಿರ್ಮಿಸಲಾಗುವುದು. ಅಪಘಾತ ಹೆಚ್ಚಿರುವ ಮತ್ತು ಅಗತ್ಯವಿರುವ ಚನ್ನಗಿರಿ, ಹರಿಹರದಲ್ಲಿ ನಿರ್ಮಿಸಲು ಕ್ರಮವಹಿಸಲಾಗುವುದು. ಐಐಎಂಎಸ್‌, ಬ್ಯಾಂಕ್‌ಗಳು ಅಥವಾ ಇತರೆ ಖಾಸಗಿಯವರ ಸಹಭಾಗಿತ್ವದಲ್ಲಿ ಸಿಗ್ನಲ್‌ಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಎನ್‌ಎಚ್‌ಎಐ ಅಧಿಕಾರಿ ಸುನಿಲ್ ಮಾತನಾಡಿ, ಬಾಡಾ ಕ್ರಾಸ್ ಬಳಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಅಪಘಾತ ವಲಯಗಳ ಸುಧಾರಣೆಗೆ ಪ್ರಾಧಿಕಾರದಿಂದ ತಲಾ ₹10 ಲಕ್ಷಗಳ ತಕ್ಷಣದ ನಿಧಿ ಲಭ್ಯವಿದೆ. ಅಗತ್ಯ ಬಿದ್ದರೆ ಪ್ರಾದೇಶಿಕ ಅಧಿಕಾರಿಗಳ ಅನುಮತಿಯೊಂದಿಗೆ ₹25 ಲಕ್ಷವರೆಗೆ ಅನುದಾನ ಬಳಸಿಕೊಳ್ಳಬಹುದು. ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ ಬಳಿ ಅಂಡರ್‌ ಪಾಸ್‌ ವಿಸ್ತೀರ್ಣ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಗಮನಕ್ಕೆ ತಂದರು.

- - -

-13ಕೆಡಿವಿಜಿ2. 3:

ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಎಸ್ಪಿ ಡಾ.ಎಚ್.ಟಿ.ಶೇಖರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಸಿಎಂ ಸಿದ್ದರಾಮಯ್ಯ ಪಲಾಯನವಾದಿ: ಕೌಟಿಲ್ಯ ಕಿಡಿ
ಜನಪದ ರಂಗಭೂಮಿಗೆ ಮರುಜೀವ ನೀಡಬೇಕು; ವೆಂಕಟೇಶ್