ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಖ್ಯಮಂತ್ರಿಯಾಗಿದ್ದಾಗ ಎಲ್ಲಿ ಸಾಮಾಜಿಕ ಸಮೀಕ್ಷೆ ವರದಿ ಸ್ವೀಕಾರ ಮಾಡಿದರೆ ತನ್ನ ಸ್ಥಾನಕ್ಕೆ ಕುತ್ತು ಬರತ್ತೋ ಅಂತ ಸಿದ್ದರಾಮಯ್ಯ ಜಾತಿ ಗಣತಿ ಹೆಸರಲ್ಲಿ ಮೂಗಿಗೆ ತುಪ್ಪ ಸವರಿದರು. ಯಾವಾಗ ಹೈಕಮಾಂಡ್‌ ನವರು ದೆಹಲಿಗೆ ಕರೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದರೋ ಆಗ ಅಧಿಕಾರ ಬಿಡುವ ಮುನ್ನ ವರದಿ ಸ್ವೀಕರಿಸಿದರು. ಸಿದ್ದರಾಮಯ್ಯ ಒಂದು ರೀತಿಯಲ್ಲಿ ಪಲಾಯನವಾದಿ. ಆತ್ಮವಂಚನೆ ಮಾಡಿಕೊಂಡು ಎಲ್ಲಾ ಸಮುದಾಯಕ್ಕೆ ದ್ರೋಹವೆಸಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ರಘು ಕೌಟಿಲ್ಯ ಟೀಕಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಜಾತಿ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯನ್ನು ಕಾಲ ಕಸದಂತೆ ಕಂಡಿದ್ದಾರೆ. ತಮ್ಮ ಅಧಿಕಾರದ ರಕ್ಷಣೆಗೆ ಪಾದರಕ್ಷೆಯಂತೆ ಆ ಸಮೀಕ್ಷೆಯನ್ನು ಬಳಸಿಕೊಂಡರು ಬಿಟ್ಟರೆ ಮೊದಲೇ ವರದಿ ಸಿದ್ಧವಿದ್ರೂ ಸ್ವೀಕಾರ ಮಾಡಲಿಲ್ಲ ಎಂದು ಹರಿಹಾಯ್ದರು.

7 ವರ್ಷ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಕಾಂತರಾಜ್ ವರದಿಯನ್ನು ಸ್ವೀಕರಿಸಲಿಲ್ಲ. ಆ ನಿಟ್ಟಿನಲ್ಲಿ ಮನಸ್ಸು ಕೂಡ ಮಾಡಲಿಲ್ಲ. ರಾಹುಲ್ ಗಾಂಧಿ ಹೇಳಿದ್ರು ಅಂತಾ ಆಯೋಗದ ವರದಿ ತಿರಸ್ಕಾರ ಮಾಡಿದರು.

ಈ ಸಂಬಂಧ ವೇಣುಗೋಪಾಲ್ ಹೇಳಿಕೆ ನೀಡಿದ್ದು ದೌರ್ಭಾಗ್ಯ. ದೆಹಲಿ ಏರ್ಪೋರ್ಟ್‌ನಲ್ಲಿ ವರದಿಯನ್ನು ಕಸದ ಬುಟ್ಟಿಗೆ ಹಾಕಿ 165 ಕೋಟಿಯನ್ನು ಹಿಂದುಳಿದವರ ಹೆಸರಿನಲ್ಲಿ ಹೋಮ ಮಾಡಿದರು. ಬಳಿಕ ಜಾತಿ ಮತ್ತು ಆರ್ಥಿಕ ಮತ್ತು ಸಾಮಾಜಿಕ ಗಣತಿ ಹೆಸರಿನಲ್ಲಿ 635 ಕೋಟಿ ರು. ಖರ್ಚು ಮಾಡಿದರು. 3 ತಿಂಗಳಲ್ಲಿ ವರದಿ ಡಿಜಿಟಲ್ ಮಾಡ್ತೇವೆ ಎಂದ್ರು, ವರ್ಷ ಆದ್ರೂ ಏನು ಆಗಿಲ್ಲ ಎಂದು ಕಿಡಿಕಾರಿದರು.


ಒಂದು ಕೋಟಿ ಜನರ ಸಮೀಕ್ಷೆ ಮಾಡದೇ ಅಪೂರ್ಣಗೊಂಡ ಸಮೀಕ್ಷೆ ಅದು. ಸ್ವೀಕಾರ ಮಾಡದೇ ಇದ್ರೇ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗುತ್ತೆ ಅಂತ ತರಾತುರಿಯಲ್ಲಿ ಅಧಿಕಾರದ ಕೊನೆ ದಿನ ವರದಿ ಸ್ವೀಕಾರ ಮಾಡಿದರು. ಅವರಿಗೆ ಬೇಕಾದಾಗ ವರದಿ ತರಿಸಿಕೊಂಡ್ರು ಎಂದರೆ ಮೊದಲೇ ವರದಿ ಸಿದ್ಧವಾಗಿತ್ತು ಅಂತಲ್ಲವೇ..? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯರಿಗೆ ಹಿಂದುಳಿದವರು, ಶೋಷಿತರು, ಧಮನಿತರ ಪರ ಕಾಳಜಿ ಇರಲಿಲ್ಲ. ಅದು ಕೇವಲ ಮೊಸಳೆ ಕಣ್ಣೀರು ಹಾಗೂ ಕೃತಕ ಬದ್ಧತೆ ಎಂದು ಆರೋಪಿಸಿದರು.

ಈಗಿನ ಸಿಎಂ ಶಿವಕುಮಾರ್ ಅವರಿಂದ ಆ ಬಲ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಯಾರು ಮಾಡ್ತಾರೆ ಅಂತಾ ಅಂದುಕೊಂಡಿದ್ವೋ ಅವರೇ ಮಾಡಲಿಲ್ಲ. ಈ ಹಿಂದೆಯೂ ಶಿವಕುಮಾರ್ ಕಾಂತರಾಜ್ ವರದಿಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಕೋರ್ಟ್ ಅಲ್ಲಿ ಹಾಗೇ ಬಿದ್ದಿರಲಿ ಅಂತಾ ಸುಮ್ಮನಾಗ್ತಾರೆ ಅಷ್ಟೇ. ಹೀಗಾಗಿ ಈ ನಡುವೆ ನ್ಯಾಯಾಲಯಕ್ಕೆ ಹೋಗುವ ವ್ಯವಸ್ಥೆ ಆಗಿದೆ. ಹಿಂದುಳಿದ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಕೇವಲ ಬಸವಣ್ಣನವರ ವಚನ‌ ಹೇಳಿಕೊಂಡು ಓಡಾಡಿದ್ರೇ ಸರಿಯಾಗಲ್ಲ. ಬಸವಣ್ಣರ ವಚನಗಳಲ್ಲಿನ ಸಾಮಾಜಿಕ ನ್ಯಾಯವನ್ನು ನೀಡಲಿ ಎಂದು ಒತ್ತಾಯಿಸಿದರು.

------------------

ಬಾಕ್ಸ್‌....

ಅಹಿಂದ ನೋಂದಣಿಯಾಗಿದೀಯಾ?

ಮಾತ್ತೆತ್ತಿದರೆ ಆರ್‌ಎಸ್ಎಸ್‌ ನೋಂದಣಿ ಯಾಕೆ ಆಗಿಲ್ಲ. ಲೆಕ್ಕಪತ್ರ ಕೊಡಿ ಎಂದು ಕೇಳುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಹಿಂದ ಅಹಿಂದಾ ಅಂತಾ ಹೇಳ್ತಾರಲ್ಲ. ಎಲ್ಲಿದೆ ಅಹಿಂದಾ ಕಚೇರಿ, ಅದರ ಅಧ್ಯಕ್ಷರು ಯಾರು? ಎಲ್ಲಿ ರಿಜಿಸ್ಟ್ರೇಶನ್ ಆಗಿದೆ. ಅಹಿಂದಾ ಅನ್ನೋದೆ ಡೋಂಗಿ. ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಮಾತನಾಡುವ ಮೊದಲು ಅಹಿಂದಾ ಕಚೇರಿ ರಿಜಿಸ್ಟರ್ ಮಾಡಿಕೊಳ್ಳಿ. ನಂತರ ಆರ್ ಎಸ್ಎಸ್ ಬಗ್ಗೆ ಕೇಳಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಗೆ ರಘು ಕೌಟಿಲ್ಯ ತಿರುಗೇಟು ನೀಡಿದರು.

ಇನ್ನು ಸಿದ್ದರಾಮಯ್ಯ ಅವರನ್ನು ಅಹಿಂದ ನಾಯಕ, ದೇವರಾಜ ಅರಸುರವರ ದಾಖಲೆ ಮುರಿದಿದ್ದಾರೆ ಅಂತಾರೇ. ದೇವರಾಜು ಅರಸು ಅವರ ನಾನ್ ಸ್ಟಾಪ್ ಮುಖ್ಯಮಂತ್ರಿ. ಸಿದ್ದರಾಮಯ್ಯ ಬ್ರೇಕಿಂಗ್ ಮುಖ್ಯಮಂತ್ರಿ, ಅವರ ದಾಖಲೆ ಮುರಿದಿಲ್ಲ ಎಂದು ಖಾರವಾಗಿ ಹೇಳಿದರು.

---------------

ಪೊಟೋ: 13ಎಸ್‌ಎಂಜಿಕೆಪಿ01

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ರಘು ಕೌಟಿಲ್ಯ ಮಾತನಾಡಿದರು.