ಕಳೆದ ಮಾ.11ರಂದು ಜಿಲ್ಲಾ ಪಂಚಾಯ್ತಿ ಆವರಣದಿಂದ ಸುಮಾರು 60 ಟನ್ ಕಬ್ಬಿಣ ಸಾಗಾಟ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಕೇಳಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅರ್ಜಿ ಸಲ್ಲಿಸಿದರೂ, ಅವರು ಈವರೆಗೆ ಯಾವುದೇ ಮಾಹಿತಿ ಒದಗಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗಲೂ, ಕಬ್ಬಿಣದ ಕಳವಿನ ಬಗ್ಗೆ ಸ್ಪಷ್ಟ ಉತ್ತರ ದೊರೆತಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಆವರಣದಿಂದ ನಾಪತ್ತೆಯಾಗಿರುವ 60 ಟನ್ ಕಬ್ಬಿಣದ ಬಗ್ಗೆ ನಿಖರ ಮಾಹಿತಿ ನೀಡುವಂತೆ ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೆ.ಆರ್.ಐ.ಡಿ.ಎಲ್. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಜಿ.ಎಸ್. ಜಯರಾಮ್ ಮಾತನಾಡಿ, ಕಳೆದ ಮಾ.11ರಂದು ಜಿಲ್ಲಾ ಪಂಚಾಯ್ತಿ ಆವರಣದಿಂದ ಸುಮಾರು 60 ಟನ್ ಕಬ್ಬಿಣ ಸಾಗಾಟ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಕೇಳಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅರ್ಜಿ ಸಲ್ಲಿಸಿದರೂ, ಅವರು ಈವರೆಗೆ ಯಾವುದೇ ಮಾಹಿತಿ ಒದಗಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗಲೂ, ಕಬ್ಬಿಣದ ಕಳವಿನ ಬಗ್ಗೆ ಸ್ಪಷ್ಟ ಉತ್ತರ ದೊರೆತಿಲ್ಲ ಎಂದು ಆರೋಪಿಸಿದರು.
ಕಬ್ಬಿಣ ಸಾಗಾಟದ ಬಗ್ಗೆ ದೂರು ದಾಖಲಿಸಿದ ನಂತರ, ಸೀಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಅವರು ದೃಶ್ಯಾವಳಿಗಳನ್ನು ನೀಡಲು ನಿರಾಕರಿಸಿದ್ದಾರೆ. ಇದು ಪ್ರಕರಣದಲ್ಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಜಯರಾಮ್ ಬೇಸರ ವ್ಯಕ್ತಪಡಿಸಿದರು.ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳು ಕಬ್ಬಿಣವನ್ನು ಸಂಪನ್ಮೂಲ ಕೇಂದ್ರದ ಉದ್ಘಾಟನೆಗಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲಿಗೆ ಸ್ಥಳಾಂತರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಕಬ್ಬಿಣ ಕಳುವಾಗಿರುವ ಬಗ್ಗೆ ಸತ್ಯಾಂಶ ಹೊರಬರಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಮಾಹಿತಿ ಒದಗಿಸಬೇಕು ಆಗ್ರಹಿಸಿದರು.
ಕಬ್ಬಿಣ ನಾಪತ್ತೆ ಪ್ರಕರಣದ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದಿದ್ದಲ್ಲಿ, ನ್ಯಾಯಾಲಯದ ಮೊರೆ ಹೋಗಲು ನಾವು ಸಿದ್ಧರಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಲ್ಲೇಶ್, ರಮೇಶ್, ಕೊಮ್ಮೇರಹಳ್ಳಿ ಆನಂದ್, ಹುಲಿವಾನ ಸಾಗರ್, ವಿಜಯ್ ಕುಮಾರ್, ಲಲಿತಮ್ಮ, ಚಾಮರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.