23ರಿಂದ ವೀರಶೈವ ಮಹಾಸಭಾ 24ನೇ ಮಹಾಅಧಿವೇಶನ

KannadaprabhaNewsNetwork |  
Published : Dec 18, 2023, 02:00 AM IST
ದಾವಣಗೆರೆಯಲ್ಲಿ ಡಿ.23 ಮತ್ತು 24 ರಂದು ಹಮ್ಮಿಕೊಂಡಿರುವ ವೀರಶೈವ ಮಹಾಸಭಾದ ಮಹಾಅಧಿವೇಶನ ಕುರಿತು ವೀರಶೈವ ಸಮಾಜದ ಪ್ರಮುಖರು ಬಳ್ಳಾರಿಯಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಸಮುದಾಯದ ವಿವಿಧ ಸಚಿವರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಪಾಲ್ಗೊಳ್ಳುವರು.

ಬಳ್ಳಾರಿ: ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾಅಧಿವೇಶನ ಡಿ. 23 ಮತ್ತು 24ರಂದು ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ ಹಾಗೂ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1904ರಲ್ಲಿ ಹಾನಗಲ್ಲು ಕುಮಾರಸ್ವಾಮಿಗಳು ಸ್ಥಾಪಿತ ಅಖಿಲ ಭಾರತ ವೀರಶೈವ ಮಹಾಸಭಾ ಕಳೆದ 119 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಾಸಭೆಗೆ ರಾಜ್ಯದಲ್ಲಿ 1.75 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ವೀರಶೈವ ಲಿಂಗಾಯತರನ್ನು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಂಘಟಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಮಹಾ ಅಧಿವೇಶನ ಆಯೋಜಿಸಲಾಗಿದೆ.

ಕೇಂದ್ರ ಸರ್ಕಾರ ವೀರಶೈವ ಲಿಂಗಾಯತ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಹಾಗೂ ರಾಜ್ಯ ಸರ್ಕಾರದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕವಾಗಿ ಗಣತಿ ನಡೆಸಬೇಕು ಎಂದು ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು.

ಮಹಾಸಭಾದ 24ನೇ ಮಹಾ ಅಧಿವೇಶನದ ಸಾನ್ನಿಧ್ಯವನ್ನು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹಾಗೂ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳು ವಹಿಸುವರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಉದ್ಘಾಟಿಸುವರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಸಮುದಾಯದ ವಿವಿಧ ಸಚಿವರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಪಾಲ್ಗೊಳ್ಳುವರು.

ಎರಡು ದಿನಗಳ ಅಧಿವೇಶನದಲ್ಲಿ ಧಾರ್ಮಿಕ, ಸಾಮಾಜಿಕ, ಕೈಗಾರಿಕೆ, ಕೃಷಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಲಿವೆ. ಮಹಿಳೆಯರು ಹಾಗೂ ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಚರ್ಚಿಸಲಾಗುತ್ತಿದೆ. ಉದ್ಘಾಟನೆ ಬಳಿಕ ವಿವಿಧ ಅಧಿವೇಶನಗಳು ನಡೆಯಲಿದ್ದು, ವೀರಶೈವ ಸಮಾಜದ ಸಾಂಸ್ಕೃತಿಕ ಪರಂಪರೆ ಕುರಿತು ವಿಶೇಷ ಉಪನ್ಯಾಸಗಳು ಜರುಗಲಿವೆ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ. ರಾಮನಗೌಡ, ಕಾರ್ಯದರ್ಶಿ ಗುರುಸಿದ್ಧಯ್ಯಸ್ವಾಮಿ, ಜಂಟಿ ಕಾರ್ಯದರ್ಶಿ ದರೂರು ಶಾಂತನಗೌಡ, ವೀರಶೈವ ಮುಖಂಡರಾದ ಜನತಾ ಬಜಾರ್ ನೀಲಕಂಠಪ್ಪ, ದೊಡ್ಡನಗೌಡ, ಕೋರಿ ವಿರುಪಾಕ್ಷಪ್ಪ, ದಂಡಿನ ಶಿವಾನಂದ, ಹೊನ್ನನಗೌಡ ಬಲಗುಡ್ಡ, ಅಂಗಡಿ ಶಂಕರ್ ಡಿ. ಕಗ್ಗಲ್, ಡಾ. ಚೇತನಾ ಎಚ್.ಕೆ. ಗಡಗಿ, ಗಂಗಾವತಿ ವೀರೇಶ್, ನಂದಾ ಎಸ್. ಪಾಟೀಲ್, ಕೆ. ಚಂದ್ರಶೇಖರ್, ಯಾಳ್ಪಿ ಮೇಟಿ ದಿವಾಕರಗೌಡ, ಶಿವಕುಮಾರ್ ಕೋಟಿಕಲ್ ಮಠ, ನಾಡಗೌಡರ ಚಂದ್ರಮೋಹನ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌