230 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಕುತ್ತು !

KannadaprabhaNewsNetwork |  
Published : Mar 12, 2026, 01:00 AM ISTUpdated : Mar 12, 2026, 10:56 AM IST
 doctor

ಸಾರಾಂಶ

ಪ್ರತಿ ತಿಂಗಳು 30 ಹೆರಿಗೆ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಕೆಳದರ್ಜೆಗಿಳಿಸಲು ರಾಜ್ಯಸರ್ಕಾರ ಮುಂದಾಗಿದೆ. ಈ ಕೇಂದ್ರದಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಂಡ್ಯ ಮಂಜುನಾಥ

  ಮಂಡ್ಯ :  ಪ್ರತಿ ತಿಂಗಳು 30 ಹೆರಿಗೆ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಕೆಳದರ್ಜೆಗಿಳಿಸಲು ರಾಜ್ಯಸರ್ಕಾರ ಮುಂದಾಗಿದೆ. ಈ ಕೇಂದ್ರದಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.  

ರಾಜ್ಯದಲ್ಲಿ ಸದ್ಯ 230 ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪಟ್ಟಿ ಮಾಡಲಾಗಿದೆ. ಇಲ್ಲಿರುವ ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರ ಹುದ್ದೆಗಳನ್ನು ಕಡಿತಗೊಳಿಸಿ ಅವುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸುವುದಕ್ಕೆ ಹೊರಟಿದ್ದು, ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಇನ್ನಷ್ಟು ದೂರವಾಗುವ ಆತಂಕ ಎದುರಾಗಿದೆ. 

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳನ್ನು ಭರ್ತಿ ಮಾಡಲಾಗದೆ ರಾಜ್ಯ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ತಜ್ಞ ವೈದ್ಯರನ್ನು ವರ್ಗಾಯಿಸಲು ಮುಂದಾಗಿದೆ. ಪಿಎಚ್‌ಸಿಗಳಲ್ಲಿ ತಜ್ಞರು ಇಲ್ಲದೆಯೂ ತಿಂಗಳಿಗೆ 30 ಹೆರಿಗೆ ಸಾಧಿಸಬಹುದಾಗಿದೆ. ಹಾಗಾಗಿ ಸಿಹೆಚ್‌ಸಿಗಳಿಗೆ ತ್ರಿವಳಿ ತಜ್ಞರು ಅನಗತ್ಯ. ಈ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಮತ್ತು ಪ್ರಸವಪೂರ್ವ ಆರೈಕೆ, ಸಾಮಾನ್ಯ ಹೆರಿಗೆ ಮತ್ತು ಶಿಶು ಆರೈಕೆಯಲ್ಲಿ ತರಬೇತಿ ಪಡೆದ ಶುಶ್ರೂಷಕರು ಇದ್ದರೆ ಸಾಕು ಎಂದು ಸರ್ಕಾರ ನಿರ್ಧರಿಸಿದೆ.

 ಇದಕ್ಕೆ ವೈದ್ಯಕೀಯ ವಲಯ ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಿಎಚ್‌ಸಿಗಳಿಗೆ ನಿತ್ಯ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ 300 ಹೊರರೋಗಿಗಳು ಬರುತ್ತಾರೆ. ಇವನ್ನೂ ಗಣನೆಗೆ ತೆಗೆದುಕೊಳ್ಳದೆ ಕೇವಲ ಹೆರಿಗೆ ಸಂಖ್ಯೆ ಮಾನದಂಡವನ್ನಾಗಿ ಪರಿಗಣಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಹಲವು ಸಿಎಚ್‌ಸಿಗಳು 2 ರಿಂದ 3 ಎಕರೆ ವಿಸ್ತೀರ್ಣದಲ್ಲಿವೆ. ಆ ಕಟ್ಟಡಗಳನ್ನು ಏನು ಮಾಡಲಾಗುತ್ತದೆ?. ತಜ್ಞ ವೈದ್ಯರುಗಳಿಲ್ಲದೆ 3 ಎಂಬಿಬಿಎಸ್ ವೈದ್ಯರಿಂದ ಆರೋಗ್ಯ ಕೇಂದ್ರವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವೇ? ಎಂಬ ಪ್ರಶ್ನೆ ಎದುರಾಗಿದೆ. 

ನೇಮಿಸಿಕೊಳ್ಳುವ ಬದಲು ಹೊಂದಿಸಲು ಯತ್ನ:

147 ತಾಲೂಕು ಆಸ್ಪತ್ರೆಗಳಲ್ಲಿ ಕೇವಲ 1 ತ್ರಿವಳಿ ತಜ್ಞರ ಹುದ್ದೆ, 98 ಆಸ್ಪತ್ರೆಗಳಲ್ಲಿ 1 ಸ್ತ್ರೀರೋಗ ತಜ್ಞರ ಹುದ್ದೆ ಮಂಜೂರಾಗಿದ್ದು, ಇವುಗಳಲ್ಲಿ 11 ಹುದ್ದೆ ಖಾಲಿ ಇವೆ. 275 ಸಿಎಚ್‌ಸಿಗಳ ಪೈಕಿ 114 ಸ್ತ್ರೀರೋಗ ತಜ್ಞರು ಕಡಿಮೆ ಕಾರ್ಯಕ್ಷಮತೆಯುಳ್ಳ 233 ಸಿಹೆಚ್‌ಸಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ 109 ಆಸ್ಪತ್ರೆಗಳಲ್ಲಿ ಒಬ್ಬರೇ ಅರವಳಿಕೆ ತಜ್ಞರಿದ್ದು, 21 ಆಸ್ಪತ್ರೆಗಳಲ್ಲಿ ಹುದ್ದೆಗಳು ಖಾಲಿ ಇವೆ. 233 ಸಿಹೆಚ್‌ಸಿಗಳಲ್ಲಿ ೮೬ ಅರವಳಿಕೆ ತಜ್ಞರು, 233 ಸಿಹೆಚ್‌ಸಿಗಳಲ್ಲಿ 119 ಮಕ್ಕಳ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ತಾಲೂಕು ಆಸ್ಪತ್ರೆಗಳು 1ರ ಬದಲಿಗೆ ಕನಿಷ್ಠ 2 ತ್ರಿವಳಿ ತಜ್ಞರನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕಾಗಿ ಹೆಚ್ಚುವರಿ ತಜ್ಞರನ್ನು ನೇಮಿಸಿಕೊಳ್ಳುವ ಬದಲು ಕಡಿಮೆ ಕಾರ್ಯಕ್ಷಮತೆಯುಳ್ಳ ಸಿಹೆಚ್‌ಸಿಗಳಿಂದ ಮರು ನಿಯೋಜಿಸಿಸಲು ಸರ್ಕಾರ ಮುಂದಾಗಿದೆ.  

ಯಾವ ಜಿಲ್ಲೆಯಲ್ಲಿ ಎಷ್ಟು ಸಿಹೆಚ್‌ಸಿಗಳಿಗೆ ಕುತ್ತು? 

ಬಾಗಲಕೋಟೆ - 7, ಬಳ್ಳಾರಿ - 4, ಬೆಳಗಾವಿ - 17, ಬೆಂಗಳೂರು ಗ್ರಾಮಾಂತರ - 3, ಬೆಂಗಳೂರು ಪಟ್ಟಣ - 5, ಬೀದರ್ - 9, ಚಾಮರಾಜನಗರ - 6, ಚಿಕ್ಕಬಳ್ಳಾಪುರ- 4, ಚಿಕ್ಕಮಗಳೂರು- 7, ಚಿತ್ರದುರ್ಗ -14, ದಕ್ಷಿಣ ಕನ್ನಡ - 11, ದಾವಣಗೆರೆ -5, ಧಾರವಾಡ - 1, ಗದಗ -4, ಹಾಸನ -13, ಹಾವೇರಿ - 5, ಕಲಬುರಗಿ -18 , ಕೊಡಗು- 6, ಕೋಲಾರ -5, ಕೊಪ್ಪಳ - 6, ಮಂಡ್ಯ- 10 , ಮೈಸೂರು- 7, ರಾಯಚೂರು - 7, ರಾಮನಗರ - 6, ಶಿವಮೊಗ್ಗ - 9, ತುಮಕೂರು - 6, ಉಡುಪಿ- 6, ಉತ್ತರ ಕನ್ನಡ -6, ವಿಜಯನಗರ - 9, ವಿಜಯಪುರ - 7, ಯಾದಗಿರಿ - 7 ಆರೋಗ್ಯ ಕೇಂದ್ರಗಳನ್ನು ಮುಚ್ಚುವ ಹಂತದಲ್ಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ