ಈ ಸಲ ಯಾರಿಗೂ ಇಲ್ಲ ‘ಉದ್ಯೋಗಿನಿ’ ಸಹಾಯಧನ

KannadaprabhaNewsNetwork |  
Published : Mar 12, 2026, 01:00 AM IST
ಲಕ್ಷ್ಮೀ ಹೆಬ್ಬಾಳ್ಕರ್‌ | Kannada Prabha

ಸಾರಾಂಶ

ರಾಜ್ಯದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಜಾರಿಗೆ ತಂದಿರುವ ರಾಜ್ಯ ಸರ್ಕಾರದ ‘ಉದ್ಯೋಗಿನಿ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸ್ವೀಕಾರವಾಗಿರುವ 42,041 ಅರ್ಜಿಗಳ ಪೈಕಿ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆಯಾಗಿಲ್ಲ!

ಕನ್ನಡಪ್ರಭ ವಾರ್ತೆ ವಿಧಾನಸಭೆ

ರಾಜ್ಯದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಜಾರಿಗೆ ತಂದಿರುವ ರಾಜ್ಯ ಸರ್ಕಾರದ ‘ಉದ್ಯೋಗಿನಿ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸ್ವೀಕಾರವಾಗಿರುವ 42,041 ಅರ್ಜಿಗಳ ಪೈಕಿ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆಯಾಗಿಲ್ಲ!

ಬುಧವಾರ ಪ್ರಶ್ನೋತ್ತರದಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಕಳೆದ ಮೂರು ವರ್ಷಗಳ ಫಲಾನುಭವಿಗಳ ವಿವರಗಳ ಪೈಕಿ 2025-26ನೇ ಸಾಲಿನಲ್ಲಿ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಶೂನ್ಯ ಸಾಧನೆ:

ಯೋಜನೆಯಡಿ 2023-24ನೇ ಸಾಲಿನಲ್ಲಿ 83,813 ಅರ್ಜಿ ಸ್ವೀಕರಿಸಲಾಗಿದೆ. 1,480 ಭೌತಿಕ ಗುರಿ ಪೈಕಿ 87 ಫಲಾನುಭವಿಗಳಿಗೆ ಮಾತ್ರ ಸಹಾಯಧನ ಬಿಡುಗಡೆಯಾಗಿದೆ. 2024-25ನೇ ಸಾಲಿನಲ್ಲಿ 16,917 ಅರ್ಜಿ ಸ್ವೀಕರಿಸಲಾಗಿದೆ. 1,540 ಭೌತಿಕ ಗುರಿ ಪೈಕಿ 73 ಫಲಾನುಭವಿಗಳಿಗೆ ಮಾತ್ರ ಸಹಾಯಧನ ನೀಡಲಾಗಿದೆ. 2025-26ನೇ ಸಾಲಿನಲ್ಲಿ 42,041 ಅರ್ಜಿ ಸ್ವೀಕರಿಸಲಾಗಿದೆ. 1,482 ಭೌತಿಕ ಗುರಿ ನೀಡಲಾಗಿತ್ತು. ಸಹಾಯಧನ ಬಿಡುಗಡೆಯಾದ ಫಲಾನುಭವಿಗಳ ಸಂಖ್ಯೆ ಶೂನ್ಯ ಎಂದು ಸಚಿವರು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

ಬ್ಯಾಂಕ್‌ಗಳು ಸಹಕರಿಸುತ್ತಿಲ್ಲ:

ಸಿದ್ದು ಸವದಿ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಯೋಜನೆ ಅಡಿ ಸಹಾಯಧನ ಬಿಡುಗಡೆಗೆ ಬ್ಯಾಂಕ್‌ಗಳೇ ಅಡ್ಡಿಯಾಗಿವೆ. ಮುಖ್ಯವಾಗಿ ಶಾಸಕರು ಫಲಾನುಭವಿಗಳ ಆಯ್ಕೆ ಮಾಡುವುದು ವಿಳಂಬವಾಗುತ್ತಿದೆ. ಈ ಆಯ್ಕೆ ಪಟ್ಟಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಿದಾಗ, ಸಿಬಿಲ್‌ ಸ್ಕೋರ್‌ ಸೇರಿ ನಾನಾ ಕಾರಣಗಳಿಂದ ಶೇ.60ಕ್ಕೂ ಹೆಚ್ಚು ಅರ್ಜಿಗಳು ವಾಪಸ್‌ ಬರುತ್ತಿವೆ. ಇಲಾಖೆ ಅಧಿಕಾರಿಗಳು ಬ್ಯಾಂಕ್‌ ಮತ್ತು ಶಾಸಕರ ಮನೆ ಅಥವಾ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಹೀಗಾಗಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ನಿಯಮ ಸರಳ ಗೊಳಿಸಲು ಚಿಂತಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಾರೂಢ ಮಠದ ನಿತ್ಯ ಪ್ರಸಾದಕ್ಕಿಲ್ಲ ಅಡಚಣೆ!
ಮೂಢ ನಂಬಿಕೆಯಿಂದಾಗಿ ಸರ್ಕಾರಿ ಕಟ್ಟಡ ಪಾಳು!