ಬಳ್ಳಾರಿ- ಸಿರುಗುಪ್ಪ- ಸಿಂಧನೂರು -ಲಿಂಗಸುಗೂರು ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯ

KannadaprabhaNewsNetwork |  
Published : Mar 12, 2026, 01:00 AM IST
ಬಳ್ಳಾರಿ- ಸಿರುಗುಪ್ಪ- ಸಿಂಧನೂರು -ಲಿಂಗಸುಗೂರು ನೂತನ ರೈಲ್ವೆ ಮಾರ್ಗ ನಿರ್ಮಾಣದ ಕೆಲಸ ಆರಂಭಿಸುವಂತೆ ಕೋರಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ನಿಯೋಗ ದೆಹಲಿಯಲ್ಲಿ ಕೇಂದ್ರ ರೈಲ್ವೆ ಮಂತ್ರಿ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.  | Kannada Prabha

ಸಾರಾಂಶ

ನಿಯೋಗ ಕೇಂದ್ರ ರೈಲ್ವೆಯ ರಾಜ್ಯ ಮಂತ್ರಿ ವಿ.ಸೋಮಣ್ಣ, ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ್ ಶೆಟ್ಟರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬಳ್ಳಾರಿ: ರಾಜ್ಯದ ಪ್ರಮುಖ ರೈಲ್ವೆ ಯೋಜನೆಯಾದ ಬಳ್ಳಾರಿ- ಸಿರುಗುಪ್ಪ- ಸಿಂಧನೂರು -ಲಿಂಗಸುಗೂರು ನೂತನ ರೈಲ್ವೆ ಮಾರ್ಗ ನಿರ್ಮಾಣದ ಕೆಲಸ ಆರಂಭಿಸುವಂತೆ ಕೋರಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಮಾಜಿ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ನೇತೃತ್ವದ ನಿಯೋಗ ಕೇಂದ್ರ ರೈಲ್ವೆಯ ರಾಜ್ಯ ಮಂತ್ರಿ ವಿ.ಸೋಮಣ್ಣ, ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ್ ಶೆಟ್ಟರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬಳ್ಳಾರಿ- ಸಿರುಗುಪ್ಪ- ಸಿಂಧನೂರು- ಲಿಂಗಸೂಗೂರು ರೈಲ್ವೆ ಮಾರ್ಗ ನಿರ್ಮಿಸಿ ರೈಲ್ವೆ ಸೇವೆ ಆರಂಭಿಸುವ ಸಂಬಂಧ ಈ ಹಿಂದೆ ಯುಪಿಎ ಸರ್ಕಾರದ ರೈಲ್ವೆ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈಲ್ವೆ ಮಂತ್ರಿಗಳಾಗಿದ್ದ ಸದಾನಂದ ಗೌಡರು ತಮ್ಮ ರೈಲ್ವೆ ಬಜೆಟ್ಟಿನಲ್ಲಿ ಈ ಮಾರ್ಗಕ್ಕೆ ಸರ್ವೆ ಆದೇಶ ಮಾಡಿದ್ದರು. ಸರ್ವೆ ಮುಗಿಸಿ 13 ವರ್ಷಗಳಾಗಿವೆ. ಇಂದಿಗೂ ಈ ಮಾರ್ಗದ ಕೆಲಸ ಆರಂಭವಾಗಿಲ್ಲ. ಕೂಡಲೇ ನೂತನ ರೈಲು ಮಾರ್ಗದ ಕೆಲಸ ಆರಂಭವಾಗಬೇಕು. ಬಳ್ಳಾರಿ ಇಂದ ಬೆಂಗಳೂರಿಗೆ ದಿನನಿತ್ಯ ಹೋಗಿ ಬರಲು ಉದಯ ಸೂಪರ್ ಫಾಸ್ಟ್ ರೈಲು ಇಲ್ಲವೇ ವಂದೇಭಾರತ್ ರೈಲಿನ ಸೌಲಭ್ಯ ಒದಗಿಸಬೇಕು. ವಿಶ್ವವಿಖ್ಯಾತ ಹಂಪಿ ಪ್ರದೇಶವನ್ನು ಒಳಗೊಂಡ ಈ ಭಾಗದಲ್ಲಿ ಉದಯ ರೈಲಿನ ಆರಂಭದಿಂದ ದೇಶ ವಿದೇಶಗಳ ಜನತೆಗೆ ಬೆಂಗಳೂರಿಗೆ ಹೋಗಿಬರಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಕಳೆದ 30 ವರ್ಷಗಳಿಂದ ಬಳ್ಳಾರಿ ಜನತೆ ಉದಯ ರೈಲಿನ ಬೇಡಿಕೆ ಇಡುತ್ತಿದ್ದೇವೆ. ಬಳ್ಳಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ -ಮುನಗೂರು -ಎಕ್ಸ್‌ಪ್ರೆಸ್ ರೈಲು ರೈಲ್ವೆ ಬಜೆಟಿನಲ್ಲಿ ಘೋಷಣೆಯಾಗಿ ಲೋಕಸಭೆಯಿಂದ ಅನುಮೋದನೆ ಪಡೆದ ರೈಲಾಗಿತ್ತು. ಕಳೆದ ಒಂದು ವರ್ಷದಿಂದ ಈ ರೈಲು ನಿಲುಗಡೆ ಆಗಿದೆ. ಶಿವಮೊಗ್ಗ- ಚೆನ್ನೈ ಬೈ ವೀಕ್ಲಿ ರೈಲುಗಳು ನಿಲುಗಡೆ ಯಾಗಿದ್ದು, ಈ ರೈಲುಗಳನ್ನು ಪುನಾರಾರಂಭಿಸಬೇಕು. ಬಳ್ಳಾರಿ ರೈಲ್ವೆ ನಿಲ್ದಾಣದ ಆಧುನಿಕರಣ ಬೇಗನೆ ಪೂರ್ಣಗೊಳ್ಳಬೇಕು. ಜೊತೆಗೆ ರಸಗೊಬ್ಬರಗಳ ಡೌನ್ಲೋಡಿಂಗ್ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಹೋರಾಟ ಸಮಿತಿಯ ಮುಖಂಡರು ಸಚಿವರಲ್ಲಿ ಕೇಳಿಕೊಂಡರು.

ನಿಯೋಗದಲ್ಲಿ ಡಿಆರ್‌ಯುಸಿಸಿ ಸದಸ್ಯ ಕೆ.ಎಂ.ಕೊಟ್ರೇಶ್, ತಾಲೂಕು ಸಮಿತಿ ಅಧ್ಯಕ್ಷ ಪಿ.ಯೋಗರಾಜ್, ಗೋನಾಳ್ ರಾಜಶೇಖರಗೌಡ, ದಮ್ಮೂರು ಶೇಖರ್, ಪಲ್ಲೇದ ಪಂಪಾಪತಿ, ಸಿರುಗುಪ್ಪ ನಗರಸಭೆ ಮಾಜಿ ಸದಸ್ಯ ನಟರಾಜ್, ಮಂಜುನಾಥ ಮಹಾದೇವ, ಚಾಗಿ ಸುಬ್ಬಯ್ಯ, ಕುಂಟನಹಾಳು ಮಲ್ಲಿಕಾರ್ಜುನ ಸೇರಿದಂತೆ 25ಕ್ಕೂ ಹೆಚ್ಚು ಜನರು ನಿಯೋಗದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಾರೂಢ ಮಠದ ನಿತ್ಯ ಪ್ರಸಾದಕ್ಕಿಲ್ಲ ಅಡಚಣೆ!
ಮೂಢ ನಂಬಿಕೆಯಿಂದಾಗಿ ಸರ್ಕಾರಿ ಕಟ್ಟಡ ಪಾಳು!