ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ 231 ಕೊಠಡಿಗಳು ಶಿಥಿಲ

KannadaprabhaNewsNetwork |  
Published : Jun 09, 2025, 12:18 AM IST
ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವುದು. | Kannada Prabha

ಸಾರಾಂಶ

ಜಿಲ್ಲೆಯ 6269 ಕೊಠಡಿಗಳು ಸುಸ್ಥಿತಿಯಲ್ಲಿವೆ. ಇನ್ನುಳಿದ 231 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದರೆ, ಇನ್ನೂ 500ಕ್ಕೂ ಹೆಚ್ಚು ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ.

ನಾರಾಯಣ ಹೆಗಡೆ

ಹಾವೇರಿ: ಶೈಕ್ಷಣಿಕ ವರ್ಷ ಶುರುವಾಗುತ್ತಲೇ ಈ ಸಲ ಮಳೆಯೂ ಹಿಂಬಾಲಿಸಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು, ಶಿಕ್ಷಕರ ಕೊರತೆ ಮಧ್ಯೆಯೇ ಮಕ್ಕಳು ಶಾಲೆಯತ್ತ ಹೋಗುತ್ತಿದ್ದಾರೆ.

ಜಿಲ್ಲೆಯ ಹಲವು ಶಾಲೆಗಳಲ್ಲಿ 231 ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿಯೇ ಶಾಲೆಗಳತ್ತ ಹೆಜ್ಜೆ ಹಾಕುವ ಅನಿವಾರ್ಯತೆ ಎದುರಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ಅನೇಕ ಪಾಲಕರ ಅಭಿಪ್ರಾಯವಾಗಿದ್ದರೂ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಮಳೆ ಗಾಳಿಗೆ ಹೆಂಚು ಹಾರಿ ಹೋಗಿರುವುದು, ಗೋಡೆ ಕುಸಿದಿರುವುದು, ಚಾವಣಿ ಬಿದ್ದು ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಭಾಗ್ಯಕ್ಕೆ ಕಾಯುತ್ತಿವೆ.ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಸುಮಾರು 1.75 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 1130 ಪ್ರಾಥಮಿಕ ಹಾಗೂ 154 ಪ್ರೌಢಶಾಲೆಗಳು ಸೇರಿದಂತೆ 1284 ಶಾಲೆಗಳಿವೆ. ಇವುಗಳಲ್ಲಿ ಸುಮಾರು 7500 ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಮಳೆ ಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ತರಗತಿ ಕೊರತೆ ಎದುರಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಮಸ್ಯೆಯಾಗುತ್ತಿದೆ. ಜಿಲ್ಲೆಯ 6269 ಕೊಠಡಿಗಳು ಸುಸ್ಥಿತಿಯಲ್ಲಿವೆ. ಇನ್ನುಳಿದ 231 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದರೆ, ಇನ್ನೂ 500ಕ್ಕೂ ಹೆಚ್ಚು ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ. ವಿವೇಕ ಯೋಜನೆಯಡಿ ಜಿಲ್ಲೆಗೆ 207 ಶಾಲಾ ಕೊಠಡಿಗಳು ಮಂಜೂರಾಗಿದ್ದು, ಇದರಲ್ಲಿ 195 ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ. ಎರಡು ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ 10 ಕೊಠಡಿಗಳ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಮೇ ತಿಂಗಳ ಪೂರ್ತಿ ಮಳೆಯಾಗಿದ್ದರಿಂದ ಶಾಲಾ ಕೊಠಡಿಗಳು ಮತ್ತಷ್ಟು ಶಿಥಿಲಗೊಂಡು ಸೋರುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಕಟ್ಟಿದ ಕೆಲವೇ ವರ್ಷಗಳಲ್ಲಿ ಬಿರುಕು ಬಿಟ್ಟು ಅವು ಸೋರುವಂತಾಗಿವೆ. ಕೆಲವು ಶಾಲೆಗಳಲ್ಲಿ ಸಿಮೆಂಟ್ ತುಂಡುಗಳು ಮಕ್ಕಳ ತಲೆಮೇಲೆ ಬೀಳುತ್ತಿರುವ ನಿದರ್ಶನಗಳು ಸಾಕಷ್ಟಿದ್ದು, ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ.

ಇದರೊಂದಿಗೆ ಶಿಕ್ಷಕರ ಕೊರತೆಯೂ ಜಿಲ್ಲೆಯಲ್ಲಿ ಸಾಕಷ್ಟಿದೆ. ಬರೋಬ್ಬರಿ 1498 ಹುದ್ದೆ ಖಾಲಿಯಿದ್ದು, ಆ ಜಾಗಕ್ಕೆ ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತರಗತಿ ನಡೆಸಲಾಗುತ್ತಿದೆ. ಆದರೆ, ಕಾಯಂ ಶಿಕ್ಷಕರ ನೇಮಕವಾಗದ ಹೊರತು ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ. ಜತೆಗೆ ಶೌಚಾಲಯ, ಅಡುಗೆ ಕೋಣೆ, ಗ್ರಂಥಾಲಯ ಇತ್ಯಾದಿ ಕೊರತೆಗಳು ಸಾಕಷ್ಟಿವೆ.

ಸಂಪೂರ್ಣ ಶಿಥಿಲ: ಜಿಲ್ಲೆಯಲ್ಲಿ 231 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವಿವೇಕ ಯೋಜನೆಯಡಿ ಜಿಲ್ಲೆಗೆ 207 ಶಾಲಾ ಕೊಠಡಿಗಳು ಮಂಜೂರಾಗಿದ್ದು, ಇದರಲ್ಲಿ 195 ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪರಿಸ್ಥಿತಿ ಎದುರಾಗಿಲ್ಲ. ಜಿಲ್ಲೆಯಲ್ಲಿ 6497 ಮಂಜೂರಾತಿ ಶಿಕ್ಷಕರ ಹುದ್ದೆಗಳಿದ್ದು, 1498 ಹುದ್ದೆಗಳು ಖಾಲಿ ಇವೆ. ಸರ್ಕಾರ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶಿಸಿದ್ದು, ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಸುರೇಶ ಹುಗ್ಗಿ ತಿಳಿಸಿದರು.ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳುತಾಲೂಕು ಶಾಲೆಗಳು ಕೊಠಡಿಗಳುಹಾನಗಲ್ಲ 37 63ಹಿರೇಕೆರೂರು 2837ಸವಣೂರು 24 51ಹಾವೇರಿ 19 25ಶಿಗ್ಗಾಂವಿ 13 17ಬ್ಯಾಡಗಿ 06 11ರಾಣಿಬೆನ್ನೂರು 12 27ಒಟ್ಟು 139 231

ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳ ವಿವರತಾಲೂಕು ಮಂಜೂರು ಹುದ್ದೆ ಖಾಲಿ ಹುದ್ದೆಬ್ಯಾಡಗಿ 602 119ಹಾನಗಲ್ಲ 1228 355ಹಾವೇರಿ 1009 202ಹಿರೇಕೆರೂರು 1032 204ರಾಣಿಬೆನ್ನೂರು 1018 121 ಸವಣೂರು 734 234ಶಿಗ್ಗಾಂವಿ 874 263ಒಟ್ಟು 6497 1498

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ