ಆಶ್ರಯ ಬಡಾವಣೆಯಲ್ಲಿ 238 ಗ್ರಾಂ ಚಿನ್ನಾಭರಣ ಕಳವು

KannadaprabhaNewsNetwork | Published : Oct 24, 2024 12:30 AM

ಸಾರಾಂಶ

ಹನೂರು ಪಟ್ಟಣದ 13ನೇ ವಾರ್ಡಿನ ಮುಸ್ಲಿಂ ಧರ್ಮ ಗುರುಗಳ ಮನೆಯಲ್ಲಿ ರಾತ್ರಿ ಚಿನ್ನಾಭರಣ ನಗದು ದೋಚಿ ಪರಾರಿಯಾಗಿರುವ ಕಳ್ಳರು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಆರ್‌ಎಸ್ ದೊಡ್ಡಿ ಆಶ್ರಯ ಬಡಾವಣೆಯ ನಿವಾಸಿ ಸಬೀರ್ ಅಹಮದ್ ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿ 238 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಜರುಗಿದೆ.ಹನೂರು ಪಟ್ಟಣದ ಹದಿಮೂರನೇ ವಾರ್ಡಿನ ನಿವಾಸಿ ಮುಸ್ಲಿಂ ಧರ್ಮ ಗುರುಗಳಾದ ಸಬೀರ್ ಅಹಮದ್ ಅವರು ತಮ್ಮ ಸಂಬಂಧಿಕರ ಮದುವೆಗೆ ನಾಲ್ಕು ದಿನಗಳ ಹಿಂದೆ ಗುಂಡ್ಲುಪೇಟೆಗೆ ಕುಟುಂಬ ಸಮೇತ ತೆರಳಿದ್ದರು. ಮದುವೆ ಮುಗಿಸಿ ಬುಧವಾರ ಮನೆಗೆ ಬೆಳಗ್ಗೆ ಆಗಮಿಸಿದಾಗ ಬಾಗಿಲು ತೆಗೆದುಕೊಂಡಿತ್ತು ಇದನ್ನು ನೋಡಿದ ಸಬೀರ್ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ , ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಇದೇ ಅಧಿಕಾರಿಗಳಿಗೆ ಘಟನೆಯ ಸಮಗ್ರ ಮಾಹಿತಿ ನೀಡಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ನಂತರ ಸ್ಥಳ ಆಗಮಿಸಿದ ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಮನೆಯಲ್ಲಿ ಹನ್ನೊಂದು ಲಕ್ಷ ಮೌಲ್ಯದ 238 ಗ್ರಾಂ ಚಿನ್ನ 20 ಸಾವಿರ ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮನೆಯ ಮಾಲೀಕ ಸಬೀರ್ ಅಹಮದ್ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 11ನೇ ವಾರ್ಡಿನಲ್ಲಿ ಕಂತು ದೊರೆ ಮನೆಯಲ್ಲಿ 300 ಗ್ರಾಂ ಚಿನ್ನ ಹಾಗೂ 20 ಲಕ್ಷ ನಗದು‌ ಕಳ್ಳತನವಾಗಿ ಎರಡು ತಿಂಗಳುಗಳೇ ಕಳೆಯುತ್ತ ಬಂದಿದೆ. ಈ ಘಟನೆ ಬೆನ್ನಲ್ಲೇ ಬಂಡಳ್ಳಿ ಗ್ರಾಮದ ಸರ್ಕಾರಿ ಆರೋಗ್ಯ ಆರೋಗ್ಯ ಕೇಂದ್ರದಲ್ಲಿ ಸಿಸಿಟಿವಿ ವಿವಿಧ ಪರಿಕರಗಳನ್ನು ಕಳ್ಳತನ ಮಾಡಿರುವ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿರುವುದು ಹನೂರು ಪಟ್ಟಣದ ನಿವಾಸಿಗಳಿಗೆ ಆತಂಕವನ್ನುಂಟು ಮಾಡಿದೆ ಸಂಬಂಧ ಪಟ್ಟ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆ ಹಚ್ಚಿ ನೊಂದವರಿಗೆ ನ್ಯಾಯಕೂಡಿಸಬೇಕಿದೆ.

Share this article