ಮಡಿಕೇರಿ ಗಾಂಧಿ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

KannadaprabhaNewsNetwork |  
Published : Oct 24, 2024, 12:30 AM IST
ಚಿತ್ರ : 23ಎಂಡಿಕೆ1 :  ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1824 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ಈಗ 200 ವರ್ಷ ಆಗಿದೆ. ಚೆನ್ನಮ್ಮ ಜೊತೆ ಸಂಗೊಳ್ಳಿರಾಯಣ್ಣ ಸಹ ಹೋರಾಡಿದ್ದರು. ನಂತರ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಹೋರಾಡಿದ್ದರು. ಪ್ರತಿ ದಿನ, ಪ್ರತಿ ಕ್ಷಣ ಅವರ ನೆನಪು ಇರಬೇಕು. ನೆನಪಷ್ಟೆ ಅಲ್ಲದೆ ಅವರ ಜೀವನ ಸಂದೇಶ ಪಾಲಿಸಬೇಕು ಎಂದು ಹೇಳಿದರು.

ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಭರತ ಖಂಡದ ಸ್ವಾಭಿಮಾನದ ಪ್ರತೀಕ. ಅವರು ದೇಶಕ್ಕೆ ದಿಕ್ಸೂಚಿ ತೋರಿಸಿದ್ದಾರೆ. ಈ ದಿಕ್ಸೂಚಿಯಡಿ ನಾವೆಲ್ಲರೂ ನಡೆಯಬೇಕು. ಹುಟ್ಟು ಆಕಸ್ಮಿಕ, ಸಾವು ಖಚಿತ ಎಂಬಂತೆ ಬದುಕು ಹೇಗಿರಬೇಕು ಎಂದರೆ ನಮ್ಮ ಬಗ್ಗೆ ಬೇರೆಯವರು ಬರೆದಿಡುವಂತಿರಬೇಕು ಎಂದು ಅಭಿಪ್ರಾಯಪಟ್ಟರು.ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ 1824 ರಲ್ಲಿ ಬ್ರಿಟಿಷರ ವಿರುದ್ಧ ದೇಶಕ್ಕಾಗಿ ಹೋರಾಡಿದರು. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲುದು ಎಂಬುದನ್ನು ಕಿತ್ತೂರು ರಾಣಿ ಚೆನ್ನಮ್ಮ ಅವರು ಸಾಬೀತುಪಡಿಸಿದರು ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಅವರು ನಿರಂತರ ಕತ್ತಿವರಸೆ, ಬಿಲ್ಲುಗಾರಿಕೆ ತರಬೇತಿ ಪಡೆದಿದ್ದರು. ನಿರಂತರವಾದ ಒಳ್ಳೆಯ ಅಭ್ಯಾಸಗಳು ನಮ್ಮನ್ನು ಉತ್ತಮಗೊಳಿಸುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು 1778 ರ ಅ.23 ರಂದು ಅಂದಿನ ಅಖಂಡ ಧಾರಾವಾಡದ (ಇಂದಿನ ಬೆಳಗಾವಿ ಜಿಲ್ಲೆಯ)ಕಾಕತಿ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಹಸ, ಶೌರ್ಯ, ಧೈರ್ಯ, ದೇಶಪ್ರೇಮದ ಪ್ರತಿರೂಪ. ಕನ್ನಡದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರಂತೆ ಎಲ್ಲರೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಬ್ಲಾಸಂ ಶಾಲೆಯ ಮುಖ್ಯ ಶಿಕ್ಷಕಿ ಅನಸೂಯ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಿ ಭಾರತದ ನಾರಿಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರನ್ನು ದೇಶದಾದ್ಯಂತ ಸ್ಮರಿಸುವಂತಾಗಬೇಕು ಎಂದರು.

ಅನೂಪ್ ಮಾದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಇತರರು ಪಾಲ್ಗೊಂಡಿದ್ದರು. ಕುಮಾರ್ ಸ್ವಾಗತಿಸಿದರು. ಭವ್ಯ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು,

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ