24 ಗಂಟೆಗಳ ಕಾಲ ರಕ್ತದಾನ ಶಿಬಿರ ಆಯೋಜನೆ ಶ್ಲಾಘನೀಯ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Jan 24, 2025, 12:49 AM IST
23ಕೆಎಂಎನ್ ಡಿ25,26 | Kannada Prabha

ಸಾರಾಂಶ

ಅನ್ನದಾನ ಮಾಡಿದರೆ ಅದು ಹಸಿವನ್ನು ನೀಗಿಸುತ್ತದೆ. ಜೀವಧಾರೆ ಟ್ರಸ್ಟ್‌ನವರು ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ರಕ್ತದಾನ ಮಾಡಲು ತಪ್ಪು ಕಲ್ಪನೆ ಇತ್ತು. ಅದನ್ನು ಹೋಗಲಾಡಿಸುವ ಉದ್ದೇಶದಿಂದ ಇಂದು ನಾನು ಸಹ ರಕ್ತದಾನ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸೈನಿಕ ಪಿತಾಮಹ ಸುಭಾಷ್‌ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ 24 ಗಂಟೆಗಳ ಕಾಲ ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸುಭಾಷ್ ಚಂದ್ರಬೋಸ್‌ರ 128ನೇ ಜಯಂತಿ ಹಿನ್ನೆಲೆಯಲ್ಲಿ ಜೀವಧಾರೆ ಟ್ರಸ್ಟ್ ವತಿಯಿಂದ ಗುರುವಾರ ಆರಂಭವಾದ ದಿನದ 24 ಗಂಟೆ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲ ದಾನಗಳಿಗಿಂತಲೂ ರಕ್ತದಾನ ಬಹಳ ಶ್ರೇಷ್ಠತೆಯನ್ನು ಹೊಂದಿದೆ ಎಂದರು.

ಅನ್ನದಾನ ಮಾಡಿದರೆ ಅದು ಹಸಿವನ್ನು ನೀಗಿಸುತ್ತದೆ. ಜೀವಧಾರೆ ಟ್ರಸ್ಟ್‌ನವರು ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ರಕ್ತದಾನ ಮಾಡಲು ತಪ್ಪು ಕಲ್ಪನೆ ಇತ್ತು. ಅದನ್ನು ಹೋಗಲಾಡಿಸುವ ಉದ್ದೇಶದಿಂದ ಇಂದು ನಾನು ಸಹ ರಕ್ತದಾನ ಮಾಡಿದ್ದೇನೆ ಎಂದರು.

ರಕ್ತದಾನ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ದೇಶಕ್ಕೆ ಸುಭಾಷ್‌ಚಂದ್ರ ಬೋಸ್ ಅವರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿದ ಸುಭಾಷ್‌ ಚಂದ್ರ ಬೋಸ್ ಅವರು ಜನರಿಗೆ ನೀವು ಒಂದು ತೊಟ್ಟು ರಕ್ತಕೊಡಿ ನಾನು ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂಬುವ ಮಾತನ್ನು ಹೇಳಿ ಹುರಿದುಂಬಿಸಿದ್ದರು. ಅದರಂತೆ ಅವರ ಹುಟ್ಟುಹಬ್ಬದ ದಿನದಂದೇ ರಕ್ತದಾನ ಮಾಡುತ್ತಿರುವುದು ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು.

ರಕ್ತದಾನ ಮಾಡುವುದರಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಕೆಲವರಲ್ಲಿ ಇರುವ ತಪ್ಪುಕಲ್ಪನೆಯನ್ನು ಬಿಡಬೇಕು. ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರಿಯಾಗಿದೆ ಎಂದರು.

ಅಪಘಾತ ನಡೆದ ತುರ್ತು ಸಂದರ್ಭದಲ್ಲಿ ಹಲವು ಜೀವಗಳಿಗೆ ಮುಖ್ಯವಾಗಿ ರಕ್ತ ಬೇಕಿದೆ. ಇಂತಹ ಸನ್ನಿವೇಶದಲ್ಲಿ ರಕ್ತದ ಕೊರತೆ ಕಾಡುವುದರಿಂದ ಅಗತ್ಯವಾಗಿ ಎಲ್ಲರೂ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹಾಗೂ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ರಕ್ತದಾನ ಮಾಡಿದರು. ಎಸ್‌ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಜೀವಧಾರ ಟ್ರಸ್ಟ್ ಅಧ್ಯಕ್ಷ ನಟರಾಜು, ಡಾ.ಆಶಾಲತಾ, ಡಾ.ಮಾದೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಹೊಸ ದಾಖಲೆಗೆ ಸಜ್ಜಾದ ಜೀವಧಾರೆ‌ ಟ್ರಸ್ಟ್

ನಿರಂತರ 24 ಗಂಟೆಗಳ ಕಾಲ ರಕ್ತದಾನ ಶಿಬಿರದ ಮೂಲಕ 1500 ಯೂನಿಟ್ ರಕ್ತ ಸಂಗ್ರಹಕ್ಕೆ ಜೀವಧಾರೆ ಟ್ರಸ್ಟ್ ಮುಂದಾಗಿದೆ. ಈ ಬೃಹತ್ ಶಿಬಿರದ ಮೂಲಕ ನೊಬೆಲ್ ವರ್ಲ್ಡ್ ರೆಕಾರ್ಡ್ ಸೇರಲು ಮುಂದಾಗಿದೆ. ಶಿಬಿರಕ್ಕೆ ಯುವ ಸಮೂಹದಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಈಗಾಗಲೇ 1700ಕ್ಕೂ‌ ಹೆಚ್ಚು ಮಂದಿಯಿಂದ ರಕ್ತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು.

ಗುರುವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿರುವ ರಕ್ತದಾನ ಶಿಬಿರ ನಾಳೆ ಶುಕ್ರವಾರ ಬೆಳಗ್ಗೆ 8 ಗಂಟೆವರೆಗೆ ನಡೆಯಲಿದೆ. ಡೀಸಿ, ಎಸ್ಪಿ, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳು, ಮುಖಂಡರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದು ಗಮನ ಸೆಳೆದಿದೆ. ರಕ್ತದಾನ ಶಿಬಿರದ ನಂತರ ಸಂಗ್ರಹಿಸಿದ ರಕ್ತವನ್ನು ಸೈನಿಕರ ಕಮಾಂಡೋ ಆಸ್ಪತ್ರೆಗೂ ರವಾನೆಯಾಗಲಿದೆ. ಅಲ್ಲದೇ, ಮಂಡ್ಯ ಮಿಮ್ಸ್, ಮೈಸೂರು ಕೆ.ಆರ್.ಆಸ್ಪತ್ರೆ, ಬಿಜಿಎಸ್ ಆಸ್ಪತ್ರೆಗೂ ರಕ್ತ ರವಾನೆಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!