ಬಿ. ರಾಮಪ್ರಸಾದ್ ಗಾಂಧಿ
ತಾಲೂಕಿನ 24 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಹಲವೆಡೆ ಖಾಸಗಿ ಬೋರ್‌ವೆಲ್, ಬಾಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಮೂಲಕ ಸಮಸ್ಯೆಗೆ ತುಸು ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ ದಿನದಿಂದ ನೀರಿನ ಸಮಸ್ಯೆ ಉಲ್ಬಣವಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ಎಲ್ಲೆಲ್ಲಿ ಸಮಸ್ಯೆ?: ಹುಣಸಿಕಟ್ಟೆ, ಅಣಜಿಗೇರಿ, ಶ್ರೀನಿವಾಸಪುರ, ಗಡಿಗುಡಾಳು, ಹನುಮನಹಳ್ಳಿ, ಬೂದಿಹಾಳ್, ಕಂಚಿಕೇರಿ, ಚಿಗಟೇರಿ, ಯು. ಬೇವಿನಹಳ್ಳಿ, ಉಚ್ಚಂಗಿದುರ್ಗ, ಜೋಷಿಲಿಂಗಾಪುರ, ಪವನಪುರ, ಕ್ಯಾರಕಟ್ಟಿ, ಯರಬಳ್ಳಿ, ಕಡೇಕಲ್ ತಾಂಡಾ, ಪುಣಭಗಟ್ಟಿ ತಾಂಡಾ, ಚೆನ್ನಾಪುರ ತಾಂಡಾ, ಕಮ್ಮತ್ತಹಳ್ಳಿ, ಯು. ಕಲ್ಲಹಳ್ಳಿ, ಮೈದೂರು, ನಿಲುವಂಜಿ, ಬಾಪೂಜಿನಗರ, ಗೋವೇರಹಳ್ಳಿ ಹೀಗೆ 24ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.
ಇವುಗಳಲ್ಲದೆ ಇನ್ನೂ ಅನೇಕ ಗ್ರಾಮಗಳಲ್ಲಿ ಪ್ರತಿದಿನ ನೀರಿನ ಸಮಸ್ಯೆಯ ದೂರು ಗ್ರಾಪಂ, ತಾಲೂಕು ಆಡಳಿತಕ್ಕೆ ಬರುತ್ತಿವೆ. ಹೀಗಾಗಿ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಸಂಖ್ಯೆ ಹೆಚ್ಚುತ್ತಿವೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ತಾಲೂಕು ಆಡಳಿತದವರು ಖಾಸಗಿ ಕೊಳವೆಬಾವಿಗಳ ರೈತರಿಂದ ಬಾಡಿಗೆ ಆಧಾರದ ಮೇಲೆ ಪಡೆದು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.ಟ್ಯಾಂಕರ್ ನೀರು: ಹುಣಸಿಕಟ್ಟೆ ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್‌ನವರು ನೀರು ಕೊಡಲು ಒಪ್ಪದ ಕಾರಣ ಅಲ್ಲಿ ಮಾತ್ರ ಬಾಡಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಹಣ ಮಂಜೂರು: ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ₹24 ಲಕ್ಷ ಮಂಜೂರಾಗಿದ್ದು, ಆ ಹಣದಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಇದೀಗ ಪುನಃ ₹25 ಲಕ್ಷ ಅನುದಾನ ಜಿಲ್ಲಾಡಳಿತದಿಂದ ಬಿಡುಗಡೆಯಾಗಿದೆ. ಕ್ರಿಯಾಯೋಜನೆ ತಯಾರಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ಆರ್. ಕಿರಣ ನಾಯ್ಕ ತಿಳಿಸಿದರು.ಪ್ರತಿ ಮನೆ ಮನೆಗೂ ನಳ ಅಳವಡಿಸುವ ಜಲಜೀವನ ಮಿಷನ್ ಯೋಜನೆಯ ಕೆಲಸ 126 ಹಳ್ಳಿಗಳಲ್ಲಿ ಪೂರ್ಣಗೊಂಡು ನೀರು ನೀಡಲಾಗುತ್ತದೆ ಎಂದು ಎಂಜಿನಿಯರ್ ಹೇಳುತ್ತಾರೆ.
ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ನೀರು ಹರಿಸಿರುವುದರಿಂದ ಹರಪನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಸರಬರಾಜಿನಲ್ಲಿ ಅಂದಾಜು ಒಂದೂವರೆ ತಿಂಗಳು ಯಾವುದೇ ಸಮಸ್ಯೆ ಇರುವುದಿಲ್ಲ. ನಂತರ ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಟ್ಯಾಂಕರ್‌ಗಾಗಿ ಟೆಂಡರ್: ಹರಪನಹಳ್ಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಮರ್ಪಕವಾಗಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಖಾಸಗಿ ಟ್ಯಾಂಕರ್‌ಗಳ ಪಡೆಯಲು ಟೆಂಡರ್ ಕರೆದಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದರು.