9 ಗ್ರಾಮಗಳಲ್ಲಿ 24/7 ನೀರು, ಮತ್ತೆ 12 ಗ್ರಾಮಕ್ಕೆ ಗುರಿ: ಸಿಇಒ

KannadaprabhaNewsNetwork |  
Published : May 23, 2025, 11:52 PM ISTUpdated : May 23, 2025, 11:53 PM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆಯ 799 ಶುದ್ಧ ನೀರಿನ ಘಟಕಗಳ ಪೈಕಿ 190 ದುರಸ್ತಿಗೆ ಬಂದಿವೆ. ಶೇ.60 ಘಟಕಗಳನ್ನು ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಪಂ ಸಿಇಒ ಸುರೇಶ ಬಿ. ಇಟ್ನಾಳ ಹೇಳಿದ್ದಾರೆ.

- ಸಚಿವ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಒತ್ತಾಸೆಯಂತೆ ಹಸಿರು ಯಜ್ಞಕ್ಕೆ ಸಂಕಲ್ಪ - ರಸ್ತೆ, ಕಚೇರಿ, ಶಾಲಾ-ಕಾಲೇಜು-ಹಾಸ್ಟೆಲ್-ವಿವಿ, ಕೆರೆಯಂಗಳದಲ್ಲಿ ಸಸಿ ನೆಡುವ ಕಾರ್ಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯ 799 ಶುದ್ಧ ನೀರಿನ ಘಟಕಗಳ ಪೈಕಿ 190 ದುರಸ್ತಿಗೆ ಬಂದಿವೆ. ಶೇ.60 ಘಟಕಗಳನ್ನು ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಪಂ ಸಿಇಒ ಸುರೇಶ ಬಿ. ಇಟ್ನಾಳ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲೆಯ 2 ಗ್ರಾಮಗಳಿಗೆ ಮಾತ್ರ ಖಾಸಗಿ ಕೊಳವೆ ಬಾವಿಗಳ ಮೂಲಕ ಚನ್ನಗಿರಿ, ದಾವಣಗೆರೆ ತಾಲೂಕಿನ ತಲಾ ಒಂದೊಂದು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.

ಮಳೆಗಾಲ ಶುರುವಾದ ಹಿನ್ನೆಲೆ ಎಲ್ಲಿಯೂ ಅಷ್ಟಾಗಿ ನೀರಿನ ಸಮಸ್ಯೆ ಕಾಣಿಸಿಲ್ಲ. ಕಳೆದ ವರ್ಷ ನೀರಿನ ಸಮಸ್ಯೆ ಕಾಣಿಸಿತ್ತು. 72 ಗ್ರಾಮಗಳಿಗೆ 119 ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗಿತ್ತು. ಕುಡಿಯುವ ನೀರು ಪೂರೈಕೆಗೆ ₹75 ಲಕ್ಷ ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿ ಹಾಗೂ ತಾವು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡಲಿದ್ದೇವೆ ಎಂದರು.

ಮಳೆಗಾಲದಲ್ಲಿ ಕಲುಷಿತ ನೀರು ಕುಡಿಯುವ ನೀರಿನ ಪೈಪ್ ಸೇರುತ್ತಿತ್ತು. ಸರ್ಕಾರದ ನಿರ್ದೇಶನದಂತೆ ಪೈಪ್‌ಲೈನ್‌ ಪರಿಶೀಲಿಸುವ ಕೆಲಸವೂ ಆಗುತ್ತಿದೆ. ಯಾವುದೇ ಭಾಗದ ಮೊದಲ ಮತ್ತು ಕೊನೆಯ ಮನೆ, ಶಾಲಾ-ಕಾಲೇಜು, ಹಾಸ್ಟೆಲ್‌ಗಳ ನೀರಿನ ಸ್ಯಾಂಪಲ್ ಸಂಗ್ರಹಿಸಿ, ಪರಿಶೀಲಿಸಲಾಗುತ್ತಿದೆ. ಆಕಸ್ಮಾತ್ ಯಾವುದೇ ಸ್ಯಾಂಪಲ್‌ನಲ್ಲಿ ವ್ಯತ್ಯಾಸ ಕಂಡರೆ ಪೈಪ್ ಲೈನ್ ಪರಿಶೀಲಿಸಿ, ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಲಜೀವನ್ ಮಿಷನ್ ನಡಿ ನೀರಿನ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. 24/7 ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಅಧೀಕ್ಷಕರು ತಲಾ 2 ಗ್ರಾಮಗಳನ್ನು ದತ್ತು ಪಡೆದು, ಗಮನಿಸುತ್ತಿದ್ದೇವೆ. ಪ್ರತಿ ಮನೆಗೆ ನೀರಿನ ನಲ್ಲಿಗೆ ಮೀಟರ್ ಅಳವಡಿಸಿ, ನೀರು ಸಂಗ್ರಹಿಸಿಡುವುದನ್ನು ತಪ್ಪಿಸಲು, ನೀರಿನ ಮಿತ ಬಳಕೆಗೆ ಒತ್ತು ನೀಡಲಾಗಿದೆ. ನಿನ್ನೆವರೆಗೆ ಜಿಲ್ಲೆಯ 9 ಗ್ರಾಮಗಳು, ರಾಜ್ಯದ 27 ಗ್ರಾಮಗಳಿಗೆ ದಿನದ 24 ಗಂಟೆ ನೀರು ಪೂರೈಸುವ ಕೆಲಸವಾಗುತ್ತಿದೆ. ಮೇ ತಿಂಗಳಾಂತ್ಯಕ್ಕೆ ಜಿಲ್ಲೆಯ 10-12 ಗ್ರಾಮಗಳಿಗೆ 24/7 ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದು ಸಿಇಒ ವಿವರಿಸಿದರು.

30 ಸಾವಿರ ಗಿಡ ನೆಡುವ ಸಂಕಲ್ಪ:

ಹಸಿರು ಪಥದಡಿ ಜಿಲ್ಲಾ, ಗ್ರಾಮೀಣ ರಸ್ತೆಗಳ ಸ್ಯಾಟ್ ಲೈಟ್‌ ನಕ್ಷೆ ಪಡೆದು, 113 ಕಿ.ಮಿ.ನಷ್ಟು ಉದ್ದಕ್ಕೆ ಗಿಡ ನೆಡುವ ಸಂಕಲ್ಪ ಮಾಡಲಾಗಿದೆ. 30 ಸಾವಿರ ಗಿಡಗಳನ್ನು ನೆಡುವ ಕಾರ್ಯ ಇದಾಗಿದೆ. ಈಗಾಗಲೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚನೆಯಂತೆ ವಿವಿಧ ಗಿಡಗಳನ್ನು ನೆಡಲಿದ್ದೇವೆ. ಅರಣ್ಯ ಇಲಾಖೆಯ ಮೂರು ನರ್ಸರಿಗಳಲ್ಲಿ ವಿವಿಧ ಗಿಡಗಳನ್ನು ಬೆಳೆಸಿದ್ದು, ಕೊಗ್ಗನೂರು, ದಾವಣಗೆರೆ, ಕೊಂಡಜ್ಜಿ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ನೆಡಲಿದ್ದೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಒತ್ತಾಸೆಯಂತೆ 8 ತಿಂಗಳ ಹಿಂದೆ ನೆಟ್ಟಿದ್ದ 8-10 ಅಡಿ ಎತ್ತರದ ಗಿಡಗಳು ಉತ್ತಮವಾಗಿ ಬೆಳೆದಿವೆ. ಈ ಹಿನ್ನೆಲೆಯಲ್ಲಿ ನಗರ, ಗ್ರಾಮೀಣ ಪ್ರದೇಶ, ಶಾಲಾ-ಕಾಲೇಜು-ಹಾಸ್ಟೆಲ್‌, ಸರ್ಕಾರಿ ಕಚೇರಿ ಆವರಣದಲ್ಲಿ ಸಸಿ ನೆಡಲು ನಿರ್ಧರಿಸಿದ್ದೇವೆ. ನೇರಳೆ ಸೇರಿದಂತೆ ವಿವಿಧ ಹಣ್ಣಿನ ಗಿಡ ನೆಡಲಾಗುವುದು. ದಾವಣಗೆರೆ ವಿ.ವಿ.ಯಲ್ಲಿ ಜೂ.5ಕ್ಕೆ 500 ಗಿಡ ನೆಡಲಿದ್ದೇವೆ. ಕುಂದುವಾಡ ಕೆರೆ ಏರಿ, ಅಲ್ಲಿನ ಪರಿಸರದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಸಸಿ ನೆಡಲಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!