ಪ್ರತಿ ಗ್ರಾಮದಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನ: ಸಂಸದ ರಾಜಶೇಖರ್ ಹಿಟ್ನಾಳ
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಬೇವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಶಹಪೂರ ಗ್ರಾಮವನ್ನು 24x7 ಕುಡಿಯುವ ನೀರು ಸರಬರಾಜು ಗ್ರಾಮವೆಂದು ಘೋಷಣೆ ಮಾಡಲಾಯಿತು.
ಸಂಸದ ಕೆ.ರಾಜಶೇಖರ್ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸಿ, ಶಹಾಪುರ ಗ್ರಾಮವು ದಿನದ 24 ಗಂಟೆ ನೀರು ಸರಬರಾಜು ವ್ಯವಸ್ಥೆ ಹೊಂದಿದೆ ಎಂದು ಘೋಷಿಸಿದರು.ನಂತರ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 700 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಕಾಮಗಾರಿಗಳು ಸರಿಯಾದ ಕ್ರಮದಲ್ಲಿ ಅನುಷ್ಠಾನವಾಗುತ್ತಿಲ್ಲ ಎಂಬ ಕೂಗುಗಳು ಕೇಳಿ ಬರುತ್ತಿದ್ದವು. ಈ ಸಮಸ್ಯೆ ಹೋಗಲಾಡಿಸಲು ವಿಶೇಷ ಕ್ರಮ ಕೈಗೊಂಡು ಪ್ರತಿ ಗ್ರಾಮದಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, 24x7 ನೀರು ಸರಬರಾಜು ಗ್ರಾಮ ಎಂದು ಘೋಷಣೆ ಮಾಡಲಾದ ಶಹಾಪುರದ ಗ್ರಾಮಸ್ಥರು ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಮಾನವ ದೈನಂದಿನ ಜೀವನಕ್ಕೆ ನೀರು ಅವಶ್ಯಕವಾಗಿರುವ ಸಂಪನ್ಮೂಲವಾಗಿದ್ದು, ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿ ಮನೆಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಗ್ರಾಮದ ಸ್ವಚ್ಛತೆಗೂ ಹೆಚ್ಚಿನ ಗಮನ ನೀಡಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಗ್ರಾಮದ ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸ್ವಸಹಾಯ ಸಂಘಗಳಿಗೆ ನೀಡಬೇಕು. ನೀರಿನ ಕರ ವಸೂಲಾತಿಯ ಮೇಲೆ ಶೇ.10ರಷ್ಟು ಕಮಿಷನ್ ನೀಡಬೇಕು ಎಂದು ಸಲಹೆ ನೀಡಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹೇಶ್ ಶಾಸ್ತ್ರಿ ಮಾತನಾಡಿ, ದಿನದ 24 ಗಂಟೆ ನೀರು ಸರಬರಾಜು ಯೋಜನೆಯಿಂದ ಪ್ರತಿ ಮನೆಗೆ ಮೀಟರ್ ಅಳವಡಿಸಲಾಗಿದ್ದು, ದಿನ ನಿತ್ಯ ಪ್ರತಿ ವ್ಯಕ್ತಿಗೆ 55 ಲೀಟರ್ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ನೀರು ಪೂರೈಕೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸ್ವಸಹಾಯ ಸಂಘಗಳ ಬಳಕೆ ಮಾಡಿಕೊಳ್ಳಲಾಗುವುದು. ಸುಸ್ಥಿರ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಗಳಿಗೆ ತರಬೇತಿ ನೀಡಿ ಬಲಪಡಿಸಲಾಗಿದೆ ಹಾಗೂ ಪ್ರತಿ ನಲ್ಲಿಯಿಂದ ಒಂದು ನಿಮಿಷಕ್ಕೆ 10 ಲೀಟರ್ ನೀರು ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಲಾಸ್‌ರಾವ್ ಬೋಸ್ಲೆ, ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷ ಮುರಳೀಧರ ಬಸಿರಾಳ, ಪಿಡಿಒ ಗೀತಾಕುಮಾರಿ ಧುತ್ತರಗಿ, ಡಿಪಿಎಂ ಶರಣು, ಬೆಂಗಳೂರ ಫೀಡ್ ಬ್ಯಾಕ್ ಫೌಂಡೇಶನ್ ರಾಜ್ಯ ಸಂಯೋಜಕ ಡಾ. ನಂದಕುಮಾರ, ಸಿಬ್ಬಂದಿ ಓಂಕಾರ, ರವಿಚಂದ್ರ ಹಾಗೂ ಶಶಿಕುಮಾರ ಸೇರಿದಂತೆ ಗ್ರಾಮ ಸದಸ್ಯರು, ಜಲಜೀವನ್ ಮಿಸನ್ ತಂಡದವರು, ಶಾಲಾ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.