ಎನ್‌ಡಿಎ ಅಭ್ಯರ್ಥಿ ರ್‍ಯಾಲಿಗೆ ಹರಿಹರದಿಂದ ೨೫,೦೦೦ ಜನ

KannadaprabhaNewsNetwork | Published : Apr 19, 2024 1:03 AM

ಸಾರಾಂಶ

ಬೃಹತ್ ರ್‍ಯಾಲಿಯಲ್ಲಿ ಹರಿಹರ ಕ್ಷೇತ್ರದಿಂದ ೨೫,೦೦೦ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸುವರು

ಕನ್ನಡಪ್ರಭ ವಾರ್ತೆ ಹರಿಹರ

ದಾವಣಗೆರೆ ಲೋಕಸಭಾ ಕ್ಷೇತ್ರದ ಗಾಯತ್ರಿ ಸಿದ್ದೇಶ್ವರ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸುವ ಬೃಹತ್ ಶೋಭಾಯಾತ್ರೆಗೆ ಹರಿಹರ ಕ್ಷೇತ್ರದಿಂದ ಮೈತ್ರಿ ಪಕ್ಷವಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಮಹಿಳೆಯರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಎಂದು ಶಾಸಕ ಬಿ.ಪಿ ಹರೀಶ್ ತಿಳಿಸಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಕಡೆಯಿಂದ ಆರಂಭವಾಗುವ ಮೆರವಣಿಗೆಯು ಶುಕ್ರವಾರ ಬೆಳಗ್ಗೆ ೯.೩೦ರಿಂದ ದಾವಣಗೆರೆ ರಾಮ್ ಅಂಡ್ ಕೋ ಸರ್ಕಲ್ ನಿಂದ ಹರಿಹರದ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬಂದು ಸೇರಬೇಕು. ನಂತರ ಈ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಗಿ ಗಾಂಧಿ ವೃತಕ್ಕೆ ಬಂದು ಸೇರಲಿದೆ ಎಂದರು.

ಉತ್ತರ ವಿಧಾನಸಭಾ ಕ್ಷೇತ್ರದದಿಂದ ನಿಟ್ಟುವಳ್ಳಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ ನಂತರ ಆರಂಭವಾಗುವ ಮೆರವಣಿಗೆಯು ವಿವಿಧ ಬಡಾವಣೆಗಳ ಮೂಲಕ ಗಾಂಧಿ ವೃತಕ್ಕೆ ಬಂದು ಸೇರುವುದು. ಹಾಗೆಯೇ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ದಾವಣಗೆರೆ ದುಗ್ಗಮ್ಮಗೆ ಪೂಜೆ ಸಲ್ಲಿಸಿ ನಂತರ ಆರಂಭವಾಗುವ ಮೆರವಣಿಗೆ ಗಾಂಧಿ ವೃತಕ್ಕೆ ಬಂದು ಸೇರುವುದು. ನಂತರ ಬೃಹತ್ ಶೋಭಾ ಯಾತ್ರೆಯ ಮೂಲಕ ಅರುಣ ಟಾಕೀಸ್ ಸಮೀಪದ ಬಿಜೆಪಿ ಪಕ್ಷದ ಚುನಾವಣಾ ಕಚೇರಿಯವರೆಗೂ ಸಾಗಿ ಬಂದು ಮುಕ್ತಾಯವಾಗಲಿದೆ.

ಜೆಡಿಎಸ್ ಪಕ್ಷದ ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಮಾತನಾಡಿ, ನಾಮಪತ್ರ ಸಲ್ಲಿಸುವ ಈ ಮೆರವಣಿಗೆಯಲ್ಲಿ ಬಿಜೆಪಿ ಪಕ್ಷದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಚಿವ ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ಬಳ್ಳಾರಿ ಸಂಸದ ದೇವೇಂದ್ರಪ್ಪ, ಚಲನಚಿತ್ರ ನಟಿ ಶೃತಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್ ನವೀನ್, ಶಾಸಕ ಜನಾರ್ಧನ್ ರೆಡ್ಡಿ ಭಾಗವಹಿಸುವರು.

ಈ ಬೃಹತ್ ರ್‍ಯಾಲಿಯಲ್ಲಿ ಹರಿಹರ ಕ್ಷೇತ್ರದಿಂದ ೨೫,೦೦೦ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸುವರು. ಎನ್‌ಡಿಎ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರು ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದು, ಈಗಾಗಲೇ ಮೈತ್ರಿ ಪಕ್ಷದ ಮುಖಂಡರುಗಳು ಮನೆ ಮನೆಗೆ ಭೇಟಿ ನೀಡಿ ಮೋದಿರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಕೋರಿಕೊಂಡಿದ್ದೇವೆ ಎಂದರು.

ಹರಿಹರ ಕ್ಷೇತ್ರಕ್ಕೆ ಮಲತಾಯಿ ಧೋರಣೆಯಾಗಿದ್ದು, ಬಿಜೆಪಿ ಪಕ್ಷದ ಶಾಸಕರ ಇರುವ ಈ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡದೇ ಇರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಕಾರಣದಿಂದ ಹರಿಹರ ಕ್ಷೇತ್ರ ಜನರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕ ಬಿ.ಪಿ ಹರೀಶ್ ಮತ್ತು ನಾನು ಕ್ಷೇತ್ರದ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗೆ ಒಟ್ಟಾಗಿ ಧ್ವನಿ ಎತ್ತುತ್ತೇವೆ ಎಂದರು.

ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಆಟೋ ಹನುಮಂತಪ್ಪ, ಪಿ.ಎನ್ ವಿರೂಪಾಕ್ಷ, ಬಿ.ಅಲ್ತಾಫ್, ಉಷಾ ಮಂಜುನಾಥ್, ರತ್ನಮ್ಮ ಉಜ್ಜೇಶ್, ದಿನೇಶ್ ಬಾಬು, ಮುಖಂಡರಾದ ಪರಮೇಶ್ವರಪ್ಪ, ಅಜಿತ್ ಸಾವಂತ್, ಪ್ರೇಮ್ ಕುಮಾರ್, ಗಣೇಶ್ ದಾಸಕರಿಯಪ್ಪ, ರಾಜು ರೋಖಡೆ, ಪರಶುರಾಮ ಕಾಟ್ವೆ, ಜಿ.ನಂಜಪ್ಪ, ಮಂಜನಾಯ್ಕ್, ತುಳಜಪ್ಪ ಭೂತೆ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Share this article