ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಏ.19 ಗುರುವಾರದಿಂದ 23ರ ವರೆಗೆ ಅರ್ಥಪೂರ್ಣ ಕಾರ್ಯಕ್ರಮಗಳು ನೆರವೇರಲಿವೆ. ಈ ಐದು ದಿನದ ಐತಿಹಾಸಿಕ ಸಮಾರಂಭಕ್ಕೆ ನಾಡಿನ ಹೆಸರಾಂತ ಮಠಾಧೀಶರು, ಹಿರಿಯ ಸಾಹಿತಿಗಳು, ಬುದ್ದಿಜೀವಿಗಳು, ಕಲಾವಿದರು, ಗಣ್ಯರು ಸಾಕ್ಷಿಯಾಗಲಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಬ್ಯಾನರ್‌ಗಳ ಅಬ್ಬರ ಕಾಣುತ್ತಿಲ್ಲ. ಆದರೆ, ಸಮಾರಂಭದ ಯಶಸ್ವಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಚನ್ನಬಸವಾಶ್ರಮ ಪರಿಸರದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಐದು ದಿನಗಳ ಕಾಲ ನಿರಂತರ ಅನ್ನದಾಸೋಹಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ವಾಗತ ಸಮಿತಿ ರಚನೆಗೊಂಡಿದೆ. ಜತೆಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಿದ್ದರಿಂದ ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ಎಲ್ಲ ಕಾರ್ಯಗಳು ನಡೆಯುತ್ತಿವೆ.ಪಟ್ಟದ್ದೇವರ ಸ್ಮರಣೋತ್ಸವ ಪೂರ್ವಭಾವಿಯಾಗಿ ಈಗಾಗಲೇ ಏ.10 ರಿಂದ ಪ್ರವಚನ ಪ್ರಾರಂಭಗೊಂಡಿದೆ. ಅತ್ತಿವೇರಿಯ ಬಸವೇಶ್ವರಿ ತಾಯಿ ಅವರು ಅಕ್ಕಮಹಾದೇವಿ ಜೀವನ ದರ್ಶನ ವಿಷಯದ ಮೇಲೆ ಭಕ್ತರಿಗೆ ಜ್ಞಾನದಾಸೋಹ ಉಣ ಬಡಿಸುತ್ತಿದ್ದಾರೆ.
ಇಂದು ವಚನೇತರ ಸಾಹಿತ್ಯ ಗೋಷ್ಠಿ ಉದ್ಘಾಟನೆ: ಶುಕ್ರವಾರ ಸಂಜೆ 6ಕ್ಕೆ ನಡೆಯುವ ಅಕ್ಕನ ವಚನೇತರ ಸಾಹಿತ್ಯ ಗೋಷ್ಠಿ ಉದ್ಘಾಟನೆ ಮೂಲಕ ಐದು ದಿನದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಹಿರಿಯ ಚಿಂತಕ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರು ಗೋಷ್ಠಿ ಉದ್ಘಾಟಿಸಲಿದ್ದಾರೆ. ಬೀದರ್ ಲಿಂಗಾಯತ ಮಹಾಮಠದ ಡಾ.ಅಕ್ಕ ಅನ್ನಪೂರ್ಣ ತಾಯಿ ಸಾನ್ನಿಧ್ಯ ವಹಿಸುವರು.
ಕಲಬುರಗಿಯ ಸಹಾಯಕ ಅಭಿಯಂತರ ಬಸವರಾಜ ಬಿಜ್ಜಲವಾಡೆ ಅವರನ್ನು ಸನ್ಮಾನಿಸಲಾಗುತ್ತಿದೆ. ದಿಲೀಪಕುಮಾರ ಡೊಂಗರಗೆ, ಸೋಮಶೇಖರ ಪಾಟೀಲ್, ರಾಜಪ್ಪ ಪಾಟೀಲ್, ಸೂರ್ಯಕಾಂತ ಸುಂಟೆ, ಸಿದ್ದಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ಕಂಟೆಪ್ಪ ಗಂದಿಗೂಡೆ, ಚಂದ್ರಶೇಖರ ಬನ್ನಾಳೆ, ದಿಲೀಪ ಮಡಿವಾಳ, ನಂದಕುಮಾರ ಹಡಪದ, ಏಕನಾಥ ಪಂಚಾಳ, ಬಸವರಾಜ ಚಂದಾ, ಮನೋಹರ ಕಾವಳೆ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.